ಪುತ್ತೂರು, ಫೆಬ್ರವರಿ 21, 2023 (ಕರಾವಳಿ ಟೈಮ್ಸ್) : ಸರಕಾರಿ ಸಾರಿಗೆ ಬಸ್ಸಿನಲ್ಲಿ ಅಂಗ ವಿಕಲ ವ್ಯಕ್ತಿಗೆ ಆಸನ ಬಿಟ್ಟು ಕೊಡಲು ಹೇಳಿದ ಮಹಿಳಾ ನಿರ್ವಾಹಕಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಹಸನ್ ಮುರ್ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಬಸ್ ನಿಲ್ದಾಣದಿಂದ ಹೊರಟ ಸರಕಾರಿ ಬಸ್ ಇಲ್ಲಿನ ಮಾರ್ಕೆಟ್ ಬಳಿಯ ತಂಗುದಾಣಕ್ಕೆ ತಲುಪಿದಾಗ ಅಂಗವಿಕಲರೊಬ್ಬರು ಮತ್ತು ವೃದ್ಧರೊಬ್ಬರು ಬಸ್ಸಿಗೆ ಹತ್ತಿದ್ದು, ಬಸ್ಸಿನ ಹಿಂಭಾಗದ ಮೂರನೇ ಸೀಟಿನಲ್ಲಿ ಕುಳಿತಿದ್ದ ಯುವಕನಲ್ಲಿ ಮಹಿಳಾ ನಿರ್ವಾಹಕಿ ಅಂಗವಿಕಲರಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದಾಗ ಯುವಕನು ಅವ್ಯಾಚವಾಗಿ ಬೈದು, ಅನುಚಿತವಾಗಿ ವರ್ತಿಸಿರುವುದಲ್ಲದೆ ಹಲ್ಲೆ ನಡೆಸಿರುತ್ತಾನೆ ಎಂದು ಆರೋಪಿಸಲಾಗಿದೆ.
ಘಟನೆ ವೇಳೆ ಮಹಿಳಾ ನಿರ್ವಾಹಕಿ ಬೊಬ್ಬೆ ಹೊಡೆದಾಗ ಅರೋಪಿ ಯುವಕನು ಬಸ್ಸಿನಿಂದ ಇಳಿದು ಓಡಿ ಹೋಗಿದ್ದು, ಈತನ ಬಗ್ಗೆ ವಿಚಾರಿಸಿದಾಗ ಹಸನ್ ಮುರ ಎಂದು ತಿಳಿದು ಬಂದಿದೆ.
ಬಳಿಕ ಮಹಿಳಾ ನಿರ್ವಾಹಕಿ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಬದಲಿ ಬಸ್ಸು ಬಂದ ಬಳಿಕ ಚಿಕಿತ್ಸೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 504, 323, 353, 354 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment