ಬೆಳ್ತಂಗಡಿ, ಮಾರ್ಚ್ 29, 2023 (ಕರಾವಳಿ ಟೈಮ್ಸ್) : ತಾಲೂಕಿನ ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಸಂತ ಜೋಸೆಪರ ಪೆÇೀರೋನಾ ಚರ್ಚ್ ಬಳಿ ಬುಧವಾರ ಅಪರಾಹ್ನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಬೈಕ್ ಸವಾರನನ್ನು ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮದ ಪಡ್ಯಾರು ಮಜಲು ನಿವಾಸಿ ಸರ್ವೆಯ್ ಸಹಾಯಕ ವೃತ್ತಿಯ ಪ್ರಸಾದ್ ಶೆಟ್ಟಿ (27) ಎಂದು ಹೆಸರಿಸಲಾಗಿದ್ದು, ಗಾಯಾಳು ಸಹಸವಾರನನ್ನು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಜ್ಯೋತಿ ಆಸ್ಪತ್ರೆ ಸಮೀಪದ ನಿವಾಸಿ, ಸರ್ವೇಯರ್ ವೃತ್ತಿಯ ವಿಶ್ವನಾಥ ರಾವ್ (42) ಎಂದು ಗುರುತಿಸಲಾಗಿದೆ.
ಪ್ರಸಾದ್ ಶೆಟ್ಟಿ ತನ್ನ ಮೋಟಾರು ಸೈಕಲಿನಲ್ಲಿ ಸರ್ವೆಯರ್ ವಿಶ್ವನಾಥ್ ರಾವ್ ಅವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮುಂಡಾಜೆ ಕಡೆಯಿಂದ ಧರ್ಮಸ್ಥಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಲಾರಿ ಚಾಲಕ ತಿರುವು ರಸ್ತೆಯಲ್ಲಿ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಒಮ್ಮಲೆ ಲಾರಿಯನ್ನು ರಸ್ತೆಯ ಎಡಬದಿಗೆ ಚಲಾಯಿಸಿದ ಪರಿಣಾಮ ಲಾರಿಯ ಹಿಂಬದಿಯ ಚಕ್ರ ಪ್ರಸಾದ್ ಶೆಟ್ಟಿಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಪ್ರಸಾದ್ ಶೆಟ್ಟಿ ಹಾಗೂ ವಿಶ್ವನಾಥ ರಾವ್ ಅವರಿಬ್ಬರೂ ಮೋಟಾರು ಸೈಕಲ್ ಸಹಿತ ರಸ್ತೆಗೆ ಬಿದ್ದಿದ್ದು, ಲಾರಿಯ ಹಿಂದಿನ ಚಕ್ರ ಪ್ರಸಾದ್ ಅವರ ಬಲಕಾಲಿನ ತೊಡೆಯ ಬಳಿ ಹಾದು ಹೋದ ಪರಿಣಾಮ ಪ್ರಸಾದ್ ಅವರ ಬಲಕೈ ಮಣಿಗಂಟಿಗೆ ರಕ್ತ ಗಾಯ, ಹೊಟ್ಟೆಯ ಕೆಳಗಡೆ ತೊಡೆಯ ಬಳಿ ಗುದ್ದಿದ ತೀವ್ರ ಸ್ವರೂಪದ ಗಾಯ ಹಾಗೂ ಸಹ ಸವಾರ ವಿಶ್ವನಾಥ್ ರಾವ್ ಅವರ ಬಲಕೈ ಮೊಣಗಂಟಿನ ಬಳಿ ರಕ್ತಗಾಯಗಳಾಗಿರುತ್ತದೆ.
ತಕ್ಷಣ ಇಬ್ಬರನ್ನು ಕೂಡಾ ಚಿಕಿತ್ಸೆಗಾಗಿ ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ಪೈಕಿ ಪ್ರಸಾದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ನಿವಾಸಿ ಅರುಣಾ ಎಂಬವರು ನೀಡಿದ ದೂರಿನಂತೆ ಆರೋಪಿ ಲಾರಿ ಚಾಲಕ ಆನಂದ ಎಂಬಾತನ ವಿರುದ್ದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2023 ಕಲಂ 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment