ಮಂಗಳೂರು, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಜಂಜಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಪರಿಹಾರ ಕಂಡುಕೊಂಡಿದೆ ಎನ್ನಲಾಗಿದ್ದು, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ ಉಮೇದುವಾರಿಕೆ ಫಿಕ್ಸ್ ಆಗಿದೆ ಎಂದು ತಿಳಿದು ಬಂದಿದೆ. ಕ್ಷೇತ್ರದ ಕಾಂಗ್ರೆಸ್ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರ ಆಕ್ರೋಶದ ಬಿಸಿ ದೆಹಲಿವರೆಗೂ ತಟ್ಟಿದ್ದು ಇನ್ನೇನು ಕೊಂಚ ಯಾಮಾರಿದರೂ ಸುಳ್ಯ ಕ್ಷೇತ್ರದ ಪರಿಸ್ಥಿತಿಯಲ್ಲೂ ಇಲ್ಲೂ ನಿರ್ಮಾಣವಾದರೆ ಚುನಾವಣಾ ಹೊಸ್ತಿಲಲ್ಲಿ ಕಾರ್ಯಕರ್ತರನ್ನು ನಿಭಾಯಿಸುವುದೇ ಕಷ್ಟ ಸಾಧ್ಯವಾದೀತು ಎಂಬುದನ್ನು ಕಾಂಗ್ರೆಸ್ ನಾಯಕರು ಮನಗಂಡು ಇದೀಗ ಈ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸುಳ್ಯ ಕ್ಷೇತ್ರದ ಟಿಕೆಟ್ ಕೃಷ್ಣಪ್ಪ ಅವರ ಪಾಲಾಗಿದ್ದು, ಈ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಕ್ಷೇತ್ರದ ಕಯ ಕಾರ್ಯಕರ್ತರು ನಂದಕುಮಾರ್ ಪರವಾಗಿ ಬ್ಯಾಟ್ ಬೀಸಿ ಮಂಗಳೂರುಗೆ ತೆರಳಿ ಭಾರೀ ಪ್ರತಿಭಟನೆ ನಡೆಸುವ ಮೂಲಕ ಪಕ್ಷದ ನಾಯಕರಿಗೆ ಟಾಂಗ್ ನೀಡುವ ಕೆಲಸ ನಿರ್ವಹಿಸಿದ್ದಾರೆ. ಇನ್ನು ಸುರತ್ಕಲ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇಲ್ಲೂ ಕೊಂಚ ಯಾಮಾರಿದರೂ ಸುಳ್ಯದ ಪರಿಸ್ಥಿತಿಯೇ ನಿರ್ಮಾಣವಾದರೆ ಸುಳ್ಯಕ್ಕಿಂತ ಗಂಭೀರ ಪರಿಣಾಮದ ಸುಳಿವು ದೊರೆತ ಹಿನ್ನಲೆಯಲ್ಲಿ ಕ್ಷೇತ್ರ ಸಂಚಾರದಲ್ಲಿರುವ ಮೊಯಿದಿನ್ ಬಾವಾ ಅವರೇ ಸೈ ಎಂಬ ನಿರ್ಧಾರಕ್ಕೆ ಪಕ್ಷದ ನಾಯಕರು ಬಂದಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದೆ.
ಈಗಾಗಲೇ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲದ ಹಿನ್ನಲೆಯಲ್ಲಿ ಸ್ವತಃ ಮಧ್ಯಪ್ರವೇಶಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ರಾಜ್ಯ ನಾಯಕ, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಮಾಜಿ ಶಾಸಕ ಮೊಯಿದಿನ್ ಬಾವಾ ವಿರುದ್ದವಾಗಿ ಚಾಲ್ತಿಯಲ್ಲಿಲ್ಲದ ಹೆಸರುಗಳನ್ನು ಮುಂಚೂಣಿಗೆ ತರದಂತೆ ಸ್ಪಷ್ಟ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು, ಇದು ಮೊಯಿದಿನ್ ಬಾವಾ ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೊಯಿದಿನ್ ಬಾವಾ ಅವರು ಪಕ್ಷದ ಹೈಕಮಾಂಡ್ ತನಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಗ್ಯಾರಂಟಿಯಾಗಿದ್ದು, ಸ್ಪರ್ಧೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಈಗಾಗಲೇ ಕ್ಷೇತ್ರದಲ್ಲಿ ನಾನು ಮಾಡಿಕೊಂಡಿದ್ದೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜನರನ್ನು ಭ್ರಮಾಲೋಕದಲ್ಲಿ ತೇಲಾಡಿಸಿದ ಪರಿಣಾಮ ಸೋಲಾಗಿದ್ದರೂ ಆ ಬಳಿಕವೂ ಕ್ಷೇತ್ರದ ಜನರನ್ನು ಬಿಟ್ಟು ಬಿಡದೆ ಪಕ್ಷದ ಪರವಾಗಿಯೂ ಸ್ವಂತ ನೆಲೆಯಲ್ಲಿಯೂ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪಕ್ಷ ಸಂಘಟಿಸಿದ್ದೇನೆ. ಇದುವೇ ನನ್ನ ಪರವಾಗಿ ಹೈಕಮಾಂಡ್ ಒಲವು ತೋರಲು ಕಾರಣ ಹೊರತು ಇತರ ಯಾವುದೇ ಪ್ರಭಾವ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ತನಗೆ ಟಿಕೆಟ್ ಸಿಗುವುದು ಗ್ಯಾರಂಟಿ ಎಂದು ಗೊತ್ತಾಗುತ್ತಲೇ ಕೆಲ ವಿಘ್ನ ಸಂತೋಷಿಗಳು ನನ್ನ ವಿರುದ್ದ ಚೆಕ್ ಬೌನ್ಸ್ ಎಂಬ ಗಾಳಿಯಲ್ಲಿ ಗುಂಡು ಹೊಡೆಯುವ ರೀತಿಯ ನಿರಾಧಾರ ಆರೋಪಗಳನ್ನು ಹೊರಿಸಿ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಇದೆಲ್ಲವೂ ಸ್ಪಷ್ಟವಾದ ಸುಳ್ಳಾರೋಗಳಾಗಿದ್ದು, ಈ ಬಗ್ಗೆ ಪುರಾವೆ ಏನಾದರೂ ಒದಗಿಸಿದರೆ ಸ್ವತಃ ನಾನಾಗಿಯೇ ಟಿಕೆಟ್ ತ್ಯಾಗ ಮಾಡಿ ರಾಜಕೀಯವಾಗಿಯೂ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ.
ಕಳೆದ ಚುನಾವಣೆಯ ಸೋಲಿನ ಬಳಿಕ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವೆ ನಿರಂತರ ಒಡನಾಟ ಇಟ್ಟುಕೊಂಡಿದ್ದಲ್ಲದೆ ಶಾಸಕ ಅಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರ ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಅಭಿವೃದ್ದಿ ಕಾಮಗಾರಿಗಳನ್ನೂ ನಡೆಸಿದ್ದಲ್ಲದೆ, ಕೊರೋನಾ ಲಾಕ್ ಡೌನ್ ಸಂದರ್ಭ ತನ್ನ ಸ್ವಂತ ದುಡ್ಡಿನಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆರೋಗ್ಯ ಸಂಬಂಧಿ ಸೇವೆ ಸಹಿತ ಇತರ ಮಾನವೀಯ ಸೇವೆಗಳನ್ನು ಜಾತಿ-ಧರ್ಮ, ಪಕ್ಷ ಬೇಧ ನೋಡದೆ ನಡೆಸಿದ್ದಾರೆ. ಸ್ವತಃ ಮುಂದಾಳುತ್ವ ವಹಿಸಿ ಶವ ಸಂಸ್ಕಾರದಂತಹ ಕಾರ್ಯಗಳನ್ನೂ ನಡೆಸಿರುವ ಮೊಯಿದಿನ್ ಬಾವಾ ಅವರಿಗೆ ಈ ಎಲ್ಲಾ ಸೇವಾ ಕಾರ್ಯಗಳೂ ಇದೀಗ ಕೈ ಹಿಡಿದಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಇನ್ನೊಂದು ಪಟ್ಟಿ ಹೊರಬಿದ್ದರೆ ಈ ಎಲ್ಲಾ ಕುತೂಹಲಗಳಿಗೂ ತೆರೆ ಬೀಳಲಿದೆ.
0 comments:
Post a Comment