ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ, ಇನ್ನು ಮೂರರಲ್ಲಿ ಉಮೇದುವಾರಿಕೆ ಇನ್ನೂ ಸಸ್ಪೆನ್ಸ್
ಮಂಗಳೂರು, ಮಾರ್ಚ್ 26, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಉಮೇದುವಾರರ ಮೊದಲ ಪಟ್ಟಿ ಶನಿವಾರ ಬಿಡುಗಡೆಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಾದ ಬಂಟ್ವಾಳ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಹಳೆ ಹುಲಿಗಳನ್ನೇ ಪಕ್ಷದ ಹೈಕಮಾಂಡ್ ನೆಚ್ಚಿಕೊಂಡಿದೆ.
ಬಂಟ್ವಾಳದ ರಾಜಕೀಯ ಭೀಷ್ಮ, ವೈಯುಕ್ತಿಕ ಜೀವನಕ್ಕಿಂತಲೂ ಜನಸೇವೆಗಾಗಿ ಜೀವನದ ಬಹುಪಾಲು ಸಮಯವನ್ನು ಮೀಸಲಿಟ್ಟು ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರಾದ್ಯಂತ ಹಾಗೂ ಜಿಲ್ಲೆ, ರಾಜ್ಯಾದ್ಯಂತ ಪಾದರಸ ಸಂಚಾರ ನಡೆಸುತ್ತಿರುವ ಮಾಜಿ ಸಚಿವ, ಮಾಜಿ ಶಾಸಕ, ಬಂಟ್ವಾಳದ ಬಂಟ, ಅಜಾತಶತ್ರು ಎಂದೇ ವಿರೋಧಿಗಳೂ ಒಪ್ಪಿಕೊಳ್ಳುವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿಯೂ “ಕೈ” ಟಿಕೆಟ್ ಕನ್ಫರ್ಮ್ ಮಾಡಿ ಸ್ಪರ್ಧೆಗೆ ಇಳಿಸಿದೆ.
ಈ ಬಗ್ಗೆ ಕರಾವಳಿ ಟೈಮ್ಸ್ ಫೆಬ್ರವರಿ 3 ರಂದು ರಾಜ್ಯದಲ್ಲೇ ಮೊದಲ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್‍ಗೊಂಡಿದೆ ಎಂಬ ವಿಶ್ವಾಸಾರ್ಹ ಮೂಲಗಳನ್ನುದ್ದೇಶಿಸಿ ವರದಿ ಪ್ರಕಟಿಸಿದ್ದು ಅದು ಇದೀಗ ಸ್ಪಷ್ಟಗೊಂಡಿದೆ. ಬಂಟ್ವಾಳ ಕ್ಷೇತ್ರದಲ್ಲಿ 8 ಬಾರಿ ಸ್ಪರ್ಧಿಸಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ರಾಜ್ಯ ಸರಕಾರದ ಕ್ಯಾಬಿನೆಟ್ ಮಂಡಳಿಯಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಅಲಂಕರಿಸಿ ಭ್ರಷ್ಟಾಚಾರ ರಹಿತವಾಗಿ, ನಿಷ್ಕಳಂಕ ರಾಜಕಾರಣಿಯಾಗಿ ಸ್ವತಃ ಕಾಂಗ್ರೆಸ್ ಪಕ್ಷದ ಹೈಕಮಾಂಡಿನಿಂದ ಮಾತ್ರವಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಹಿರಿಯ ನಾಯಕರಿಂದ ಬೆನ್ನು ತಟ್ಟಿಸಿಕೊಂಡು ರಾಜಕೀಯವಾಗಿ ಸೈ ಎನಿಸಿಕೊಂಡಿರುವ ರಮಾನಾಥ ರೈ ಅವರಿಗೆ ಈ ಬಾರಿಯೂ ಟಿಕೆಟ್ ಖಚಿತ ಎಂಬುದು ಮೊದಲೇ ತಿಳಿದಿತ್ತಾದರೂ ಹೈಕಮಾಂಡಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಹಿತ ಕೆಲ ನಿಯಮಗಳಿಂದಾಗಿ ಕಾದು ನೋಡುವ ತಂತ್ರ ಅನುಸರಿಲಾಗಿತ್ತು. ಆದರೂ ಅಧಿಕಾರ ಇದ್ದರೂ ಇಲ್ಲದಿದ್ದರೂ ಜನಸೇವೆಯಲ್ಲೇ ವರ್ಷಪೂರ್ತಿ ಓಡಾಡುತ್ತಿದ್ದ ರೈಗಳು ಈ ಬಾರಿ ಟಿಕೆಟ್ ದೊರೆತರೂ ದೊರೆಯದಿದ್ದರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಿರಂತರವಾಗಿ ಮತ ನೀಡಿ ಪ್ರೀತಿ ಧಾರೆ ಎರೆದಿದ್ದ ಕ್ಷೇತ್ರದ ಜನರ ಆಶೋತ್ತರಗಳ ಈಡೇರಿಕೆಗಾಗಿ, ಜನರ ಮೇಲಿನ ಋಣ ಜನ್ಮ ಜನ್ಮಾಂತರಗಳಲ್ಲೂ ತೀರಿಸಲು ಸಾಧ್ಯವಿಲ್ಲ ಎಂಬ ನೆಲೆಯಲ್ಲಿ ಜನಸೇವೆಯ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದರ ಭಾಗವಾಗಿ ಟಿಕೆಟ್ ಘೋಷಣೆ ಆಗದಿದ್ದರೂ ಪಕ್ಷ ಸಂಘಟನೆಗಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರಾದ್ಯಂತ ರಾಜ್ಯದಲ್ಲೇ ವಿಶಿಷ್ಟವಾದ ರೀತಿಯಲ್ಲಿ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆ ಎಂಬ 14 ದಿನಗಳ ನಿರಂತರ ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳ ಪ್ರದೇಶಗಳಿಗೆ ಭೇಟಿ ನೀಡಿ ಮತದಾರರ ಸಂಪರ್ಕಕ್ಕೆ ಪ್ರಯತ್ನಿಸಿದ್ದಲ್ಲದೆ ತನ್ನ ಅವಧಿಯ ಹಾಗೂ ಆ ಬಳಿಕದ ಅವಧಿಯ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸ್ವತಃ ಕಣ್ಣಾರೆ ಕಂಡು ಕೊಳ್ಳುವ ಪ್ರಯತ್ನ ನಡೆಸಿದ್ದರು. 14 ದಿನಗಳ ಯಶಸ್ವಿ ಬಂಟ್ವಾಳ ಪ್ರಜಾಧ್ವನಿಯ ಮರುದಿನವೇ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮವನ್ನೂ ಪಾಣೆಮಂಗಳೂರು ಹಾಗೂ ಬಂಟ್ವಾಳ ಈ ಎರಡೂ ಬ್ಲಾಕ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಸಭೆಗಳನ್ನು ಏರ್ಪಡಿಸುವ ಮೂಲಕ ಅದನ್ನೂ ಪೂರ್ಣಗೊಳಿಸಿದ್ದಾರೆ.
ಇದೀಗ ಶನಿವಾರ ಬಂಟ್ವಾಳದಲ್ಲಿ ರೈ ಅವರಿಗೆ ಕೈ ಟಿಕೆಟ್ ಘೋಷಣೆಯಾದ ತಕ್ಷಣ ರೈಗಳ ಓಡಾಟ ಚುರುಕುತನ ಮತ್ತಷ್ಟು ವೇಗ ಪಡೆದುಕೊಂಡಿದೆ. ಆರಂಭದಲ್ಲಿ ಕ್ಷೇತ್ರದ ವಿವಿಧ ದಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಿದ ಬಳಿಕ ಕ್ಷೇತ್ರದ ಧಾರ್ಮಿಕ ಗುರುಗಳ ಆಶೀರ್ವಾದವನ್ನೂ ಪಡೆದುಕೊಂಡು ಅಧಿಕೃತವಾಗಿ ಚುನಾವಣಾ ಆಖಾಡಕ್ಕೆ ಇಳಿದಿದ್ದಾರೆ.
ಕಳೆದ ಬಾರಿ ರೈಗಳು ಚುನಾವಣೆ ಸೋತರೂ ಕಾಂಗ್ರೆಸ್ ಪಕ್ಷಕ್ಕೆ ಮತ ಗಳಿಕೆಯಲ್ಲಿ ಯಾವುದೇ ರೀತಿಯ ಚ್ಯುತಿ ಬರದಂತೆ ನೋಡಿಕೊಂಡಿದ್ದಲ್ಲದೆ ತನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಹಲವು ರೀತಿಯ ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದಿರುವುದೂ ಈ ಬಾರಿಯೂ ಹೈಕಮಾಂಡ್ ರೈ ಕೈ ಹಿಡಿಯುವಂತೆ ಮಾಡುವಲ್ಲಿ ಸಫಲವಾಗಿದೆ.
ದಕ್ಷಿಣ ಕನ್ನಡದ ಮತ್ತೊಂದು ಪ್ರತಿಷ್ಠಿತ ಕ್ಷೇತ್ರವಾಗಿರುವ ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಮಾಜಿ ಸಚಿವ, ಯು ಟಿ ಖಾದರ್ ಅವರ ಉಮೇದುವಾರಿಕೆಯೂ ಘೋಷಣೆಯಾಗಿದೆ. ಟಿಕೆಟ್ ಘೋಷಣೆಯಾದ ತಕ್ಷಣ ಖಾದರ್ ಕೂಡಾ ಕ್ಷೇತ್ರದ ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಳಿಕ ತನ್ನ ಅಧ್ಯಕ್ಷತೆಯಲ್ಲಿ ನಡೆದ ನರಿಂಗಾನ ಲವ-ಕುಶ ಜೋಡುಕರೆ ಕಂಬಳದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದು ಕಂಡು ಬಂತು.
ಉಳಿದಂತೆ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರದಲ್ಲಿ ಯುವ ನಾಯಕ ಮಿಥುನ್ ರೈಗೆ ಪಕ್ಷ ಮಣೆ ಹಾಕಿದರೆ, ಬೆಳ್ತಂಗಡಿ ಕ್ಷೇತ್ರದಲ್ಲಿ ಹೊಸ ಮುಖ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ನೀಡಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲೂ ಈ ಬಾರಿ ಬದಲಾವಣೆ ಮಾಡಲಾಗಿದ್ದು, ಕೃಷ್ಣಪ್ಪ ಅವರಿಗೆ ಪಕ್ಷ ಮಣೆ ಹಾಕಿದೆ. ಟಿಕೆಟಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿರುವ ಮಂಗಳೂರು ಉತ್ತರ, ದಕ್ಷಿಣ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಇನ್ನೂ ಆಗಿಲ್ಲ. ಶೀಘ್ರದಲ್ಲಿ ಇಲ್ಲಿನ ಜಂಜಾಟ ಇತ್ಯರ್ಥಪಡಿಸಿ ಪಕ್ಷದ ಎರಡನೇ ಪಟ್ಟಿಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಕೈ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಪೂರ್ವ ತಯಾರಿ ನಡೆಸುವ ನಿಟ್ಟಿನಲ್ಲಿ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಪರ ಕಾರ್ಯಕ್ರಮಗಳ ರೂಪುರೇಷೆ ಸಿದ್ದಪಡಿಸುತ್ತಿರುವುದು ಕಂಡು ಬರುತ್ತಿದೆ.
0 comments:
Post a Comment