ಬಂಟ್ವಾಳ, ಎಪ್ರಿಲ್ 21, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 8 ನಾಮಪತ್ರಗಳ ಪೈಕಿ ಎರಡು ನಾಮಪತ್ರ ತಿರಸ್ಕøತಗೊಂಡಿದ್ದು, ಉಳಿದಂತೆ 6 ಮಂದಿಯ ನಾಮಪತ್ರ ಕ್ರಮಬದ್ದವಾಗಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಶುಕ್ರವಾರ (ಎಪ್ರಿಲ್ 21) ನಾಮಪತ್ರ ಪರಿಶೀಲನೆ ನಡೆದಿದ್ದು, ಸಲ್ಲಿಕೆಯಾದ ನಾಮಪತ್ರ ಪರಿಶೀಲನೆ ನಡೆದ ಬಳಿಕ ಚುನಾವಣಾಧಿಕಾರಿ ಈ ಮಾಹಿತಿ ನೀಡಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅನೀಶ್ ಶೆಟ್ಟಿ ಅವರು 10 ಸೂಚಕರ ಬದಲಾಗಿ ಕೇವಲ 7 ಸೂಚಕರನ್ನು ನೀಡಿರುತ್ತಾರೆ. ಅದೇ ರೀತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿ ಟಿ ಕುಮಾರ್ ಅವರು ನಾಮಪತ್ರ ಪೂರ್ಣವಾಗಿ ತುಂಬಿಸಿಲ್ಲ, ಠೇವಣಿ ಪಾವತಿಸಿಲ್ಲ, ಸೂಚಕರನ್ನು ನೀಡಿಲ್ಲ, ನಮೂನೆ 26 ತುಂಬಿಲ್ಲ. ಈ ಕಾರಣಗಳಿಗಾಗಿ ಈ ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಉಳಿದಂತೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ರಾಜೇಶ್ ನಾಯ್ಕ್ ಯು, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಎಂ ಇಲಿಯಾಸ್, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಯುವ (ಪಕ್ಷೇತರ ಅಭ್ಯರ್ಥಿ) ಅಬ್ದುಲ್ ಮಜೀದ್ ಖಾನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ ರಮಾನಾಥ ರೈ, ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಪ್ರಕಾಶ್ ರಫಾಯಲ್ ಗೋಮ್ಸ್ ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪುರುಷೋತ್ತಮ ಅವರ ನಾಮಪತ್ರ ಕ್ರಮಬದ್ದವಾಗಿದ್ದು, ಚುನಾವಣಾಧಿಕಾರಿಯಿಂದ ಅಂಗೀಕೃತಗೊಂಡಿದೆ. ಎಪ್ರಿಲ್ 24 ನಾಮಪತ್ರ ವಾಪಾಸು ಪಡೆಯಲು ಅಂತಿಮ ದಿನಾಂಕವಾಗಿದ್ದು ಅಂದು ಸಂಜೆ ಅಂತಿಮ ಕಣದಲ್ಲಿ ಉಳಿಯುವ ಉಮೇದುವಾರರ ಸ್ಪಷ್ಟ ಚಿತ್ರಣ ದೊರೆಯಲಿದೆ.
0 comments:
Post a Comment