ಮಂಗಳೂರು, ಎಪ್ರಿಲ್ 08, 2023 (ಕರಾವಳಿ ಟೈಮ್ಸ್) : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಆಕ್ಷೇಪಾರ್ಹ ಪೋಸ್ಟ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್” ಸ್ಥಾಪಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ರೀತಿಯ ಪೋಸ್ಟ್ ಹಾಕುವುದು, ದ್ವೇಷ ಹರಡುವ ಸುದ್ದಿ ಹಾಕುವುದು, ಸುಳ್ಳು ಸುದ್ದಿ ಹರಡುವುದು, ಆಶ್ಲೀಲ, ಅಸಭ್ಯ ಪೋಸ್ಟ್ ರವಾನಿಸುವುದು, ವ್ಯಕ್ತಿಗಳ ಚಾರಿತ್ರ್ಯ ಹನನ, ಮಾನಹಾನಿ ಉಂಟಾಗುವ ಪೋಸ್ಟ್ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ, ಪುತ್ತೂರು ಹಾಗೂ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಕಚೇರಿಗಳಲ್ಲಿ “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್” ಕಾರ್ಯನಿರ್ವಹಿಸುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಎಲ್ಲಾ ರೀತಿಯ ಪೋಸ್ಟ್ ಗಳ ಮೇಲೆ ನಿಗಾ ಇರಿಸಿ ಪರಿಶೀಲಿಸಲಾಗುತ್ತಿದೆ. ಸೋಶಿಯಾ ಮೀಡಿಯಾಗಳಲ್ಲಿ ಆಕ್ಷೇಪಾರ್ಹ ಅಥವಾ ಕಾನೂನು ಬಾಹಿರ ಪೋಸ್ಟ್ ಗಳು ಕಂಡುಬಂದರೆ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ ವಿಕ್ರಂ ಅಮಾಟೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment