ಬಂಟ್ವಾಳ, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು. ಆದರೆ, ಈಗ ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಬಂದರೆ ಮತ್ತೆ ಶಾಂತಿ ಕದಡುತ್ತದೆ ಎಂದು ಹೇಳುವವರೂ ಅವರೇ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದವರು ಯಾರು ಎಂಬುದು ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಬಂಟ್ವಾಳ ಕಸಬಾದ ನೇರಂಬೋಳ್, ಕೊಂಗ್ರಬೆಟ್ಟು, ಕೆಳಗಿನಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿರುವುದು ನಿಮಗೆ ತಿಳಿದಿದೆ. ನಾನು ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದೇನೆಯೇ ಹೊರತು, ದ್ವೇಷದ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಎಂದರು.
ಬಂಟ್ವಾಳದಲ್ಲಿ ಮಿನಿ ವಿಧಾನಸೌಧ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ನಿರೀಕ್ಷಣ ಮಂದಿರ, ಉದ್ಯಾನವನ ಮುಂತಾದ ಹಲವು ಅಭಿವೃದ್ಧಿ ಕಾರ್ಯ ನನ್ನ ಅವಧಿಯಲಾಗಿದೆ. ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ರಸ್ತೆ ಅಭಿವೃದ್ಧಿ ಆಗಿದೆ. ಅದನ್ನು ದಾಟಿ ಒಂದಿಂಚು ಹೆಚ್ಚು ಕಾಮಗಾರಿ ಮಾಡಲು ಬಿಜೆಪಿಗರಿಗೆ ಸಾಧ್ಯವಾಗಿಲ್ಲ. ನನ್ನ ಅಭಿವೃದ್ಧಿಗೆ ಸಾಕ್ಷಿಯಾಗಿ ವಾಮದಪದವು ಕಾಲೇಜು, ಅರೋಗ್ಯ ಕೇಂದ್ರ ನೋಡಬೇಕು. ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಆಗಿದೆ. ಆದರೆ ಕಳೆದ ಬಾರಿ ಅಪಪ್ರಚಾರ ಮಾಡಿ ನನ್ನನ್ನು ಸೋಲಿಸಲಾಗಿದೆ. ಸೋತ ಬಗ್ಗೆ ಬೇಸರವಿಲ್ಲ, ಆದರೆ ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಎಲ್ಲಿಯವರೆಗೆ ಅಪಪ್ರಚಾರ ನಡೆಸಿದರೆಂದರೆ ನನ್ನ ಹುಟ್ಟಿನ ಬಗ್ಗೆಯೂ ಸಂಶಯ ವ್ಯಕ್ತಪಡಿಸಿ ನನ್ನ ಡಿಎನ್‍ಎ ಸಂಶಯಾಸ್ಪದವಾಗಿದೆ ಎನ್ನುವಷ್ಟರ ಮಟ್ಟಿಗೂ ಅಪಪ್ರಚಾರ ನಡೆಸಿ ತೇಜೋವಧೆ ಮಾಡಿ ಸೋಲಿಸಿದರು ಎನ್ನುವುದೇ ನೋವಿನ ಸಂಗತಿ ಎಂದು ರಮಾನಾಥ ರೈ ಭಾವುಕರಾದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಡವರು ಇವತ್ತು ಕಣ್ಣೀರು ಹಾಕುತ್ತಿದ್ದಾರೆ. ಅವರೆಲ್ಲರ ಕಣ್ಣೀರು ಒರೆಸಲು ರಮಾನಾಥ ರೈ ಮತ್ತೊಮ್ಮೆ ಶಾಸಕರಾಗಿ ಗೆದ್ದು ಬರಬೇಕು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಬಂಟ್ವಾಳದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಯಾವುದೇ ಸ್ವಲಾಭ ಇಲ್ಲದೆ ಜನ ಸೇವೆ ಮಾಡಿದ ಜನ ನಾಯಕನಿದ್ದರೆ ರಮಾನಾಥ ರೈಗಳು ಮಾತ್ರ. ಇದು ಅವರ ಕೊನೆಯ ಚುನಾವಣೆ ಎಂದು ಅವರು ಹೇಳುತ್ತಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕೆಪಿಸಿಸಿ ಮುಖಂಡರುಗಳಾದ ಎಂ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಹಾಜಿ ಬಿ ಎಚ್ ಖಾದರ್, ವಾಸು ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಚಂದ್ರಶೇಖರ್ ಪೂಜಾರಿ, ಬಿ ಎಂ ಅಬ್ಬಾಸ್ ಅಲಿ, ಪ್ರವೀಣ್ ಬಂಟ್ವಾಳ್, ಪ್ರವೀಣ್ ಜಕ್ರಿಬೆಟ್ಟು, ವಿಶ್ವನಾಥ ಗೌಡ, ರಿಯಾಝ್ ಹುಸೈನ್ ಬಂಟ್ವಾಳ, ಮಹಾಬಲ ಬಂಗೇರ, ನಡುಮನೆ ಪರಮೇಶ್ವರ್ ಸಾಲ್ಯಾನ್, ರಾಜೇಶ್ ರೊಡ್ರಿಗಸ್, ಮನೋಹರ್, ಲಿಂಗಪ್ಪ ಕುಲಾಲ್, ನಿತಿನ್, ದಯಾನಂದ, ನಾರಾಯಣ ನೇರಂಬೋಳ್, ಗಣೇಶ್ ಪೂಜಾರಿ, ವೆಂಕಪ್ಪ ಮೂಲ್ಯ, ಶ್ರೀಧರ್ ಗೌಡ, ರಾಜೀವ್ ಸಾಲ್ಯಾನ್, ಮಹಾಬಲ ನೇರಂಬೋಳ್, ಗಂಗಯ್ಯ, ಉದಯ, ಚಂದ್ರಪ್ರಕಾಶ್, ರಿಯಾಝ್, ಬಶೀರ್ ಬಸ್ತಿಪಡ್ಪು, ನಾಸಿರ್ ಮೊದಲಾದವರು ಭಾಗವಹಿಸಿದ್ದರು.
















0 comments:
Post a Comment