ಬಂಟ್ವಾಳ, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ಇಡೀ ಕರ್ನಾಟಕ ನೋಡುವ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದ್ದು, ರಾಜೇಶ್ ನಾಯಕ್ ಶಾಸಕರಾದ ಬಳಿಕ ಇಲ್ಲಿ ಅಭಿವೃದ್ದಿ ಹಾಗೂ ಕಾನೂನು ಸುವ್ಯವಸ್ಥೆ ಎರಡೂ ಸುಸ್ಥಿತಿಯಲ್ಲಿದೆ ಎಂದು ತಮಿಳ್ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೊಂಡಾಡಿದರು.
ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ಪುತ್ತೂರಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುವ ದಾರಿ ಮಧ್ಯೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಚುನಾವಣಾ ಕಛೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿ ರಾಜ್ಯದ ಜನರ ಒಲವು ಬಿಜೆಪಿ ಪರವಾಗಿದ್ದು, ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರ ಪರ ಜನ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ರಿವರ್ಸ್ ಗೇರ್ ಹಾಕುತ್ತಿದ್ದರೆ, ಬಿಜೆಪಿ ಡಬಲ್ ಇಂಜಿನ್ ಮೂಲಕ ಮುನ್ನಡೆಯುತ್ತಿದೆ ಎಂದ ಅಣ್ಣಾಮಲೈ ಮುಸ್ಲಿಮರಿಗೆ ನೀಡಿರುವ 4% ಮೀಸಲಾತಿ ಕೋಟಾ ಅಸಂವಿಧಾನಿಕ ಎನ್ನುವ ನೆಲೆಯಲ್ಲಿ ಬಿಜೆಪಿ ಸರಕಾರ ಅದನ್ನು ರದ್ದುಪಡಿಸಿ ಮುಸ್ಲಿಮರನ್ನು ಆರ್ಥಿಕ ಹಿಂದುಳಿದ ವರ್ಗದ 10% ಕೋಟಾಕ್ಕೆ ಅವರನ್ನು ಸೇರಿಸಿದೆ ಹೊರತು ಯಾವುದೇ ಅನ್ಯಾಯ ಮಾಡಿಲ್ಲ. ಇದನ್ನು ಕಾಂಗ್ರೆಸ್ ಅಪಪ್ರಚಾರದ ಮೂಲಕ ಮೈಲೇಜ್ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಪಿಎಫ್‍ಐ ಬೆಳವಣಿಗೆ ಹೊಂದಿ ಅದು ಎಸ್ ಡಿ ಪಿ ಐ ಆಗಿ ರೂಪುಗೊಂಡಿದೆ. ಮುಸ್ಲಿಮರಿಗೂ ಕೂಡಾ ಬೇಡವಾದ ಪಿಎಫೈಗೆ ಕಾಂಗ್ರೆಸ್ ಬೆಂಬಲಿಸಿದೆ ಎಂದು ಆರೋಪಿಸಿದ ಅಣ್ಣಾಮಲೈ ಕಾಂಗ್ರೆಸ್ ಟಾರ್ಗೆಟ್ ಕಿಲ್ಲಿಂಗ್ ಮನಸ್ಥಿತಿಯನ್ನು ಬೆಳೆಸಿಕೊಂಡಿದೆ. ಮುಸ್ಲಿಮರೂ ಕೂಡಾ ಬಿಜೆಪಿ ಪರ ಇದ್ದು, ಅವರೂ ಕೂಡಾ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಮುಸ್ಲಿಮರನ್ನು ಇನ್ನೂ ಓಲೈಕೆ ಮಾಡುವ ಕಾರ್ಯದಲ್ಲಿ ಮಗ್ನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮೇ 6 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ ಅವರು ಬಂಟ್ವಾಳಕ್ಕೆ ಆಗಮಿಸಿ ರಾಜೇಶ್ ನಾಯಕ್ ಪರ ರೋಡ್ ಶೋ ಮೂಲಕ ಮತಯಾಚನೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯ-ಅಂತರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರು ಮುಂದಿನ ದಿನಗಳಲ್ಲಿ ಬಂಟ್ವಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಣ್ಣಾಮಲೈ ಹೇಳಿದರು. ಶಾಸಕ ರಾಜೇಶ್ ನಾಯಕ್ ಪರವಾಗಿ ನಾಯಕರು ಶಕ್ತಿ ಮೀರಿ ಪ್ರಚಾರ ನಡೆಸಲಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದು ಎಂದರು.
ಈ ಸಂದರ್ಭ ಶಾಸಕ, ಬಂಟ್ವಾಳ ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ್, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ ಕೆ ಭಟ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment