ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ವಿಪಕ್ಷಗಳ ಒಗ್ಗಟ್ಟಿನ ಬಲ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಸಕಲ ಸಿದ್ಧತೆ, ಪ್ರಮಾಣ ವಚನ ಸಮಾರಂಭ ಅದ್ಧೂರಿಯಾಗಿಸಲು ಕಾಂಗ್ರೆಸ್ ಸಕಲ ಸಿದ್ದತೆ
ಬೆಂಗಳೂರು, ಮೇ 18, 2023 (ಕರಾವಳಿ ಟೈಮ್ಸ್) : ಕರ್ನಾಟಕ ಸಿಎಂ ಹುದ್ದೆಗೆ ಬೆಳಿಗ್ಗೆಯಷ್ಟೆ ಸಿದ್ದರಾಮಯ್ಯ ಅವರ ಹೆಸರನ್ನು ಅಧಿಕೃತವಾಗಿ ಎಐಸಿಸಿ ದೆಹಲಿಯಲ್ಲಿ ಪ್ರಕಟಿಸಿದ್ದು, ಸಂಜೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ಸಿಎಂ ಎಂದು ಡಿ ಕೆ ಶಿವಕುಮಾರ್ ಅವರೇ ಸ್ವತಃ ಘೋಷಿಸಿದರು.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಎಂದು ಡಿಕೆಶಿ ಘೋಷಿಸಿ, ನಂತರ ಸಿದ್ದು ಕೈ ಕುಲುಕಿ ವಿಶ್ ಮಾಡಿದರು. ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದರು. ಆ ಮೂಲಕ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದರು.
ಸಭೆಯಲ್ಲಿ ಮೊದಲು ಮಾತನಾಡಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸರಕಾರ ತರುವಲ್ಲಿ ಟೀಂ ಕಾಂಗ್ರೆಸ್ ಪಾತ್ರ ಬಹಳ ದೊಡ್ಡದು. ಸಿದ್ದರಾಮಯ್ಯ, ಡಿಕೆಶಿ ಕೂಡ ಸಮರ್ಥವಾಗಿ ಮುನ್ನಡೆಸಿದ್ದಾರೆ. ಇದೊಂದು ದೊಡ್ಡ ಮಟ್ಟದ ವಿಜಯ. ಕರ್ನಾಟಕದ ಜನ, ನಮ್ಮ ಕಾರ್ಯಕರ್ತರನ್ನ ಮರೆಯದಿರಿ. ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಎಂದು ಹೈಕಮಾಂಡ್ ತೀರ್ಮಾನ ಆಗಿದೆ. ಸರ್ವಾನುಮತದಿಂದ ಆಯ್ಕೆ ಮಾಡೋಣ ಎಂದು ತಿಳಿಸಿದರು.
ನಂತರ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಸೂಚಿಸಿದರು. ನಂತರ ಸಿದ್ದುಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಪಕ್ಷ ಹಾಗೂ ಶಾಸಕರಿಗೆ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ರಚನೆಯಾಗುವ ನೂತನ ಸರಕಾರದ ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮ ಮೇ 20 ರಂದು ನಡೆಯಲಿದೆ. ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ಸಮಾರಂಭಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅತಿಗಣ್ಯ ಮತ್ತು ಇತರೆ ಗಣ್ಯವ್ಯಕ್ತಿಗಳಿಗೆ ಆಗಮಿಸಲಿದ್ದಾರೆ.
ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಬಿಹಾರ್ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪುದಿಚೆರಿ ಸಿಎಂ ಎನ್ ರಂಗಸ್ವಾಮಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಆಹ್ವಾನಿಸಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ವಿಪಕ್ಷಗಳ ಒಗ್ಗಟ್ಟಿನ ಬಲ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಕಾಂಗ್ರೆಸ್ ಈಗಾಗಲೇ ತಯಾರಿ ನಡೆಸಿದೆ.
ಗುರುವಾರ ಸಂಜೆ ನಡೆದ ಸಿಎಲ್‍ಪಿ ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ನಿಯೋಜಿತ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹಿತ ಹಲವು ಶಾಸಕರು ಭಾಗವಹಿಸಿದ್ದರು.






















0 comments:
Post a Comment