99 ಶೇಕಡಾ ಭರವಸೆ ಈಡೇರಿಸಿದ ಸಿದ್ದು ಮತ್ತೊಮ್ಮೆ ಸಿಎಂ ಆಗುತ್ತಿರುವುದು ಸಂತೋಷ : ರಮಾನಾಥ ರೈ - Karavali Times 99 ಶೇಕಡಾ ಭರವಸೆ ಈಡೇರಿಸಿದ ಸಿದ್ದು ಮತ್ತೊಮ್ಮೆ ಸಿಎಂ ಆಗುತ್ತಿರುವುದು ಸಂತೋಷ : ರಮಾನಾಥ ರೈ - Karavali Times

728x90

19 May 2023

99 ಶೇಕಡಾ ಭರವಸೆ ಈಡೇರಿಸಿದ ಸಿದ್ದು ಮತ್ತೊಮ್ಮೆ ಸಿಎಂ ಆಗುತ್ತಿರುವುದು ಸಂತೋಷ : ರಮಾನಾಥ ರೈ

ನಾನು ಗೆದ್ದರೆ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ದಂಧೆಕೋರರ ಮೂಲಕ ಹಣ ಹಂಚಿ ಸೋಲಿಸಿದರು : ರೈ ಆರೋಪ 


ಬಂಟ್ವಾಳ, ಮೇ 19, 2023 (ಕರಾವಳಿ ಟೈಮ್ಸ್) : ಸರಕಾರದ ವಿಫಲತೆ ಹಾಗೂ ವೈಫಲ್ಯದಿಂದ ಜನ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹಮತ ನೀಡಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತಿದೆ. ಆದರೂ ರಾಜ್ಯದಲ್ಲಿ ಬಹುಮತದ ಸರಕಾರ ಬಂದಿರುವುದಕ್ಕಾಗಿ ಸಂತೋಷ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಸಂಭ್ರಮ ಹಂಚಿಕೊಂಡರು. 

ಶುಕ್ರವಾರ ಬೆಳಿಗ್ಗೆ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬಾರದು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಪುಟಿದೇಳಲಿದೆ ಎಂದರು. 

ಈ ಹಿಂದೆ ಸರಕಾರ ನಡೆಸಿದ್ದ ವೇಳೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಶೇ 99 ಭರವಸೆಗಳನ್ನು ಈಡೇರಿಸಿದ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅದೇ ರೀತಿ ರಾಜ್ಯದಲ್ಲಿ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿದ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಉಪಮುಖ್ಯಂತ್ರಿ ಆಗುತ್ತಿದ್ದಾರೆ. ಇವರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಮಸ್ತ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದ ರೈ, ಬಿಜೆಪಿ ಪಕ್ಷ ತನ್ನ ಅಧಿಕಾರಾವಧಿಯಲ್ಲಿ 10 ಶೇಕಡಾ ಕೂಡಾ ಭರವಸೆಗಳನ್ನು ಈಡೇರಿಸಿಲ್ಲ. ಪೂರ್ಣವಾಗಿ ವಚನಭ್ರಷ್ಟವಾಗಿಯೇ ನಡೆದುಕೊಂಡಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಊಹಾಪೆÇೀಹ ಬೇಡ. ಕಾಂಗ್ರೆಸ್ ಸರಕಾರ ಯಾವತ್ತೂ ವಚನಭ್ರಷ್ಠ ಆಗಲಾರದು. ವಚನಭ್ರಷ್ಟ ಖ್ಯಾತಿ ಏನಿದ್ದರೂ ಬಿಜೆಪಿಗೆ ಮಾತ್ರ ಸಲ್ಲುತ್ತದೆ ಎಂದರು. 

ರಮಾನಾಥ ರೈ ಕ್ಷೇತ್ರದಲ್ಲಿ ಗೆದ್ದರೆ ಅಕ್ರಮಗಳಿಗೆ ಅವಕಾಶ ಇಲ್ಲ ಎಂದು ಅಕ್ರಮ ಮರಳು ದಂಧೆಕೋರರು ಗ್ರಾಮ-ಗ್ರಾಮಕ್ಕೆ ಹಣ ಹಂಚುವ ಮೂಲಕ ನನ್ನ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೆ ಕೆಲವೊಂದು  ಅಧಿಕಾರಿಗಳ ಸಹಕಾರ ಕೂಡಾ ಇದೆ ಎಂದು ಆರೋಪಿಸಿದ ರಮಾನಾಥ ರೈ ಪ್ರಗತಿಪರ ಕೃಷಿಕರು ಎಂದೇಳಿಕೊಂಡು ವ್ಯಾಪಾರ ವಹಿವಾಟು ನಡೆಸುವ ಮಂದಿಗಳು ಅಕ್ರಮ ದುಡ್ಡಿನ ಬಲದಿಂದ ನನ್ನನ್ನು ವಾಮಮಾರ್ಗದಿಂದ ಸೋಲಿಸಿದ್ದಾರೆ ಎಂದು ಪರೋಕ್ಷವಾಗಿ ಬಂಟ್ವಾಳ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. 

ಸಮಾಜ ಸೇವೆ ನನ್ನ ಕಸುಬು. ಸಮಾಜಕ್ಕಾಗಿಯೇ ನಾನು ಬದುಕಿದ್ದೇನೆ. ನಾನು ಎಲ್ಲಿಂದಲೋ ಬಂದು ಇಲ್ಲಿ ಚುನಾವಣೆಗೆ ನಿಂತು ವ್ಯಾಪಾರ-ಉದ್ದಿಮೆ ಮಾಡಿದವಲ್ಲ. ಆದರೆ ಕೆಲವರು ಸಮಾಜ ಸೇವೆಯ ಹೆಸರಿನಲ್ಲಿ ದಂಧೆ ಮಾಡುವವರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದೀಗ ಕಾಂಗ್ರೆಸ್ ಸರಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೇರುತ್ತಿದೆ. ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಾಕಿಯಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇನೆ. ಎಂದ ಮಾಜಿ ಸಚಿವ ರೈ,  ನಾನು ಯಾವತ್ತೂ, ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಮಾಡುವುದೇ ಇಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂಬುದನ್ನು ಕೆಲವರು ರಾಜಕೀಯ ನಿವೃತ್ತಿ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ಅನೇಕ ಕರೆ-ಸಂದೇಶಗಳ ಮೂಲಕ ಸೇವೆ ಮುಂದುವರಿಕೆಗೆ ಆಗ್ರಹಿಸಿದ್ದಾರೆ. ಅವರ ಪ್ರೀತಿಗೆ ನಾನು ಯಾವತ್ತೂ ಅಭಾರಿಯಾಗಿದ್ದೇನೆ. ನನ್ನ ಬದುಕಿನ ಸಂತೋಷವೇ ಜನರ ಸೇವೆಯಾಗಿದೆ. ಕಾಂಗ್ರೆಸ್ ಪಕ್ಷ ನನಗೆ ತಾಯಿಗೆ ಸಮಾನವಾಗಿದೆ. ಹೀಗಿರುತ್ತಾ ರಾಜಕೀಯದಿಂದ ಹಾಗೂ ಜನರ ಸೇವೆಯಿಂದ ನಾನು ಯಾವತ್ತೂ ನಿವೃತ್ತಿ ಆಗುವುದಿಲ್ಲ. ಪಕ್ಷದ ಕೆಲಸದಿಂದ ಯಾವತ್ತೂ ದೂರ ಆಗುವುದೂ ಇಲ್ಲ. ಪಕ್ಷದ ಆದೇಶ ಪಾಲನೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬರುತ್ತೇನೆ ಎಂದರು. 

ಕ್ಷೇತ್ರದ ಜನರೇ ನನಗೆ ಸರ್ವಸ್ವ, ಕ್ಷೇತ್ರದ ಜನರನ್ನು ನಾನು ನನ್ನ ಕುಟುಂಬದ ಸದಸ್ಯರಂತೆ ಕಂಡಿದ್ದೇನೆ. ರಾಜಕೀಯದ, ಸೇವೆಯ ಹೆಸರಿನಲ್ಲಿ ನಾನು ಯಾವತ್ತೂ ಕಮಿಷನ್ ದಂಧೆ ಮಾಡಿಲ್ಲ. ಆರ್ಥಿಕ ಸಂಪನ್ನನಾಗಿ ನಾನು ರಾಜಕೀಯ ಮಾಡಿಲ್ಲ. ಕಷ್ಟದಿಂದ ರಾಜಕೀಯ ಮಾಡಿದ್ದೇನೆ. ಹದಿಮೂರು ವರ್ಷ ಮಂತ್ರಿಯಾಗಿದ್ದರೂ ಹಣ ಮಾಡುವ ಗೋಜಿಗೆ ನಾನು ಹೋಗಿಲ್ಲ. ಕುಟುಂಬ ನೀಡಿದ ಜಮೀನಿನಲ್ಲಿದ್ದುಕೊಂಡು ಸೇವೆ ಮಾಡಿದ್ದೇನೆ ಎಂದ ರೈ ದೇಶದಲ್ಲೇ ಕಾಂಗ್ರೆಸ್ ಸೋತಾಗ ದಕ್ಷಿಣ ಕನ್ನಡ ಜಿಲ್ಲೆಯ ಜನ ಕಾಂಗ್ರೆಸ್ ಕೈ ಹಿಡಿದಿದ್ದರು. ಮತ್ತೆ ಇತಿಹಾಸ ಮರುಕಳಿಸಲಿದೆ. ಭೂಮಸೂದೆ ಕಾನೂನು ಸಾಕಷ್ಟು ಪರಿಣಾಮ ಬೀರಿದ್ದು ಜಿಲ್ಲೆಯಲ್ಲಿ. ಹೆಚ್ಚು ನಿವೇಶನ ಕೊಟ್ಟ, ಹಕ್ಕುಪತ್ರ ಕೊಟ್ಟದ್ದು ಎಲ್ಲವೂ ಜಿಲ್ಲೆಯ ಇತಿಹಾಸ. ಹೆಚ್ಚಿನ ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳು ಜಿಲ್ಲೆಯಲ್ಲಿದ್ದಾರೆ. ಎಡ ಪಂಥೀಯ ಚಳುವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದದ್ದು ಜಿಲ್ಲೆಯಲ್ಲಿ. ಈ ಎಲ್ಲಾ ಹೋರಾಟಗಳನ್ನು ಅನುಷ್ಠಾನ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ರಮಾನಾಥ ರೈ ಹೇಳಿದರು. 

ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರುಗಳಾದ ಬಿ ಪದ್ಮಶೇಖರ ಜೈನ್, ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಬಿ ಮೋಹನ್, ಜಗದೀಶ್ ಕೊಯಿಲ, ಸುರೇಶ್ ಜೋರಾ ಮೊದಲಾದವರು ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: 99 ಶೇಕಡಾ ಭರವಸೆ ಈಡೇರಿಸಿದ ಸಿದ್ದು ಮತ್ತೊಮ್ಮೆ ಸಿಎಂ ಆಗುತ್ತಿರುವುದು ಸಂತೋಷ : ರಮಾನಾಥ ರೈ Rating: 5 Reviewed By: karavali Times
Scroll to Top