ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ, ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಗೆ ಮೇ 14, ಮರು ಮೌಲ್ಯಮಾಪನಕ್ಕೆ ಮೇ 21, ಪೂರಕ ಪರೀಕ್ಷೆ ನೋಂದಣಿಗೆ ಮೇ 15 ಕೊನೆ ದಿನಾಂಕ
ಬೆಂಗಳೂರು, ಮೇ 08, 2023 (ಕರಾವಳಿ ಟೈಮ್ಸ್) : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ (ಮೇ 8) ಪ್ರಕಟಗೊಂಡಿದ್ದು, ಶೇ 83.89 ಮಂದಿ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. 2023ರ ಮಾರ್ಚ್ 31 ರಿಂದ ಎಪ್ರಿಲ್ 15ರವರೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆದಿದ್ದು, ಮೌಲ್ಯಮಾಪನ ಈ ಬಾರಿ ಯಾವುದೇ ತೊಡಕಿಲ್ಲದೆ ಸುಸೂತ್ರವಾಗಿ ನಡೆದು ಇಂದು ಫಲಿತಾಂಶ ಪ್ರಕಟಿಸಲಾಗಿದೆ.
ರಾಜ್ಯ ಒಟ್ಟು 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರಕಾರಿ ಶಾಲೆಗಳು 86.74% ಫಲಿತಾಂಶ ದಾಖಲಿಸಿದರೆ, ಅನುದಾನಿತ ಶಾಲೆಗಳು 85.64% ಹಾಗೂ ಖಾಸಗಿ ಶಾಲೆಗಳು 90.89% ಫಲಿತಾಂಶ ದಾಖಲಿಸಿವೆ. 4 ಜನ ವಿದ್ಯಾರ್ಥಿಗಳು 625 ಅಂಕಗಳಿಸಿ ಪೂರ್ಣ ಅಂಕ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಮತ್ತು ಸರಕಾರಿ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದು, ಬಾಲಕರು 3,41,108 (80.08%) ಹಾಗೂ ಬಾಲಕಿಯರು 3,59,511 (87.98%) ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಚಿತ್ರದುರ್ಗ ಜಿಲ್ಲೆ 96.80% ಫಲಿತಾಂಶದೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಮಂಡ್ಯ 96.74 ಶೇಕಡಾ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಹಾಸನ 96.88 ಶೇಕಡಾ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡರೆ, ಶೇ 75.49 ಫಲಿತಾಂಶದೊಂದಿಗೆ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲಿನ ಯಶಸ್ ಗೌಡ, ಸವದತ್ತಿಯ ಕುಮಾರೇಶ್ವರ್ ಹೈಸ್ಕೂಲಿನ ಅನುಪಮ ಶ್ರೀಶೈಲ್ ಹಿರೇಹೋಳಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲಿಷ್ ಹೈಸ್ಕೂಲಿನ ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್ 625 ಪೂರ್ಣ ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು ಮೇ 14 ಕೊನೆ ದಿನವಾಗಿದೆ. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಮೇ 21 ಕೊನೆ ದಿನವಾಗಿದೆ. ಪೂರಕ ಪರೀಕ್ಷೆಗೆ ನೋಂದಣಿಗೆ ಮೇ 15 ಕೊನೆ ದಿನವಾಗಿದೆ.
0 comments:
Post a Comment