ಮಂಗಳೂರಿನಲ್ಲಿ ಬಿಜೆಪಿ ಮುಖಂಡ ಸತೀಶ್ ಪ್ರಭು ಸಹಿತ ನಾಲ್ವರು ಕಾಂಗ್ರೆಸ್ ಸೇರ್ಪಡೆ
ಮಂಗಳೂರು, ಮೇ 07, 2023 (ಕರಾವಳಿ ಟೈಮ್ಸ್) : ಬಿಜೆಪಿ ಪ್ರಮುಖ ಸತೀಶ್ ಪ್ರಭು ಸೇರಿದಂತೆ ನಾಲ್ಕು ಮಂದಿ ಭಾನುವಾರ (ಮೇ 7) ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಎಂಎಲ್ಸಿ ಬಿ ಕೆ ಹರಿಪ್ರಸಾದ್, ಭಾರತೀಯ ಜನತಾ ಪಾರ್ಟಿ ಹಾಗೂ ನಾನಾ ಸಂಘಟನೆಯಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಮಾಡಿದ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಿಜೆಪಿಯಲ್ಲಿ ಪಕ್ಷಾಂತರ ಸುನಾಮಿ ಆರಂಭವಾಗಿದ್ದು, ಈವರೆಗೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ 47 ಮಂದಿ ಹಿರಿಯ ನಾಯಕರು ಹಾಗೂ 6 ಮಂದಿ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಮುಳುಗುತ್ತಿರುವ ಹಡಗಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಥಬೀದಿ ವೆಂಕಟರಮಣ ದೇವಳದ ಟ್ರಸ್ಟಿ ಹಾಗೂ ಬಿಜೆಪಿ ಮುಖಂಡ ಸತೀಶ್ ಪ್ರಭು ಅವರು 30 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಿಜೆಪಿ ಯುವಮೋರ್ಚಾ, ಜಿಲ್ಲಾ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರು. ಇಂತಹ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಹೆಮ್ಮೆಯೆನಿಸುತ್ತಿದೆ. ಇವರ ಜತೆ ಸಂತೋಷ್ ಶೆಟ್ಟಿ, ರಾಜೇಶ್ ಕಾಮತ್, ರಜತಾ ಆರ್ ಕಾಮತ್ ಹಾಗೂ ದೀಕ್ಷಾ ಕಾಮತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರು.
ಜನಹಿತ ಸಾಧನೆಗೆ ಕಾಂಗ್ರೆಸ್ ಸೇರ್ಪಡೆ : ಸತೀಶ್ ಪ್ರಭು
ನಾನು ಸುಮಾರು ವರ್ಷಗಳಿಂದ ಸಂಘಪರಿವಾರ, ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ನಾನಾ ಜವಾಬ್ದಾರಿ ವಹಿಸಿಕೊಂಡಿದ್ದೆ. ಆದರೆ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜನಹಿತ ಸಾಧನೆ ಗೌಣವಾಗುತ್ತಿದ್ದು, ಇದರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಸತೀಶ್ ಪ್ರಭು ಹೇಳಿದರು.
ನಾನು ಯಾವುದೇ ಅಧಿಕಾರ, ಹುದ್ದೆಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಕಾಂಗ್ರೆಸ್‍ನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಗತವೈಭವ ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಕಾಪೆರ್Çರೇಟರ್‍ಗಳಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ನವೀನ್ ಡಿಸೋಜ, ಪಕ್ಷ ಪ್ರಮುಖರಾದ ಪಿ ವಿ ಮೋಹನ್, ಲಾವಣ್ಯ ಬಲ್ಲಾಳ್, ತೇಜಸ್ವಿರಾಜ್, ಡೆನ್ನಿಸ್ ಡಿ’ಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment