ಜನವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕರ ಆದ್ಯತೆಯಾಗಲಿ : ಮುನೀರ್ ಕಾಟಿಪಳ್ಳ - Karavali Times ಜನವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕರ ಆದ್ಯತೆಯಾಗಲಿ : ಮುನೀರ್ ಕಾಟಿಪಳ್ಳ - Karavali Times

728x90

3 May 2023

ಜನವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕರ ಆದ್ಯತೆಯಾಗಲಿ : ಮುನೀರ್ ಕಾಟಿಪಳ್ಳ

ಬಂಟ್ವಾಳ, ಮೇ 03, 2023 (ಕರಾವಳಿ ಟೈಮ್ಸ್) : ದುಡಿಯುವ ಜನರ ಶತ್ರು, ಜನ ವಿರೋಧಿ ಬಿಜೆಪಿ ಸೋಲಿಸುವುದು ಕಾರ್ಮಿಕ ವರ್ಗದ ಆದ್ಯತೆಯಾಗಿದೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು. 

ಬುಧವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭ್ರಷ್ಟ, ಕೋಮುವಾದಿ ಬಿಜೆಪಿ ಆಡಳಿತದಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಬೆಲೆಯೇರಿಕೆ, ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಜನರ ಬದುಕಿನ ಮೇಲೆ ಗದಾ ಪ್ರಹಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕ ವರ್ಗದ ಆದ್ಯತೆಯಾಗಬೇಕು ಎಂದರು. 

ರೈತ, ಕಾರ್ಮಿಕರ ಚಳವಳಿಗಳ ಕೇಂದ್ರವಾಗಿದ್ದ ಬಂಟ್ವಾಳವನ್ನು ಬಿಜೆಪಿ ಇಂದು ದ್ವೇಷ ರಾಜಕಾರಣದ ಪ್ರಯೋಗ ಶಾಲೆಯಾಗಿ ಪರಿವರ್ತಿಸಿದೆ. ಬದುಕಿನ ಪ್ರಶ್ನೆಗಳನ್ನು ಕಡೆಗಣಿಸಿ, ಮತಾಂಧತೆಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಸೋಲಿಸಲು ಬಂಟ್ವಾಳದಲ್ಲಿ ಸಿಪಿಐಎಂ ಶ್ರಮಿಸಲಿದೆ ಎಂದ ಮುನೀರ್ ಕಾಟಿಪಳ್ಳ ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆ  ಬಿಜೆಪಿ ಆಡಳಿತದ ಅಡಿಯಲ್ಲಿ ಎಲ್ಲಾ ರಂಗಗಳಲ್ಲಿಯೂ ಹಿನ್ನಡೆ ಅನುಭವಿಸಿದೆ. ಸಾರ್ವಜನಿಕ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ಪೂರ್ತಿಯಾಗಿ ಕಡೆಗಣಿಸಿ ವ್ಯಾಪಾರೀಕರಣಕ್ಕೆ ಪೂರ್ಣ ಅವಕಾಶ ಒದಗಿಸಲಾಗಿದೆ. ಹೊಸದಾಗಿ ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರುವುದು, ಹೊಸ ತಾಲೂಕುಗಳಿಗೆ ಆಸ್ಪತ್ರೆಗಳನ್ನು ಮಂಜೂರುಗೊಳಿಸದಿರುವುದು, ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳನ್ನು ಕಡೆಗಣಿಸಿರುವುದು ಬಿಜೆಪಿ ಶಾಸಕರುಗಳ ನೀತಿಗಳಿಗೆ ಸಾಕ್ಷಿ. ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ, ಜಿಲ್ಲೆಯಲ್ಲಿ ತಲೆಯೆತ್ತಿರುವ ಬೃಹತ್ ಉದ್ಯಮಗಳಲ್ಲಿ ಜಿಲ್ಲೆಯ ಯುವಜನರಿಗೆ ಉದ್ಯೋಗ ಒದಗಿಸಲಾಗಲಿ ಬಿಜೆಪಿ ಶ್ರಮಿಸದಿರುವುದು ಜಿಲ್ಲೆಯಲ್ಲಿ ವ್ಯಾಪಕ ನಿರುದ್ಯೋಗಕ್ಕೆ ಕಾರಣವಾಗಿದೆ. ಇದು ಯುವಜನರಲ್ಲಿ ಅತೃಪ್ತಿಯನ್ನು ಹುಟ್ಟು ಹಾಕಿದೆ ಎಂದರು. 

ಯುವಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಜನ ಪ್ರತಿನಿಧಿಗಳು, ಅದರ ಸಾಮೂಹಿಕ ಸಂಘಟನೆಗಳು ಮಾಡುವ ಮೂಲಕ ಯುವಕರ ಬದುಕಿನಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಬಂಟ್ವಾಳ ಕ್ಷೇತ್ರವೂ ಇಂದು ಉದ್ಯೋಗ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೆ ಅಭಿವೃದ್ದಿ ಕಂಡಿಲ್ಲ. ವಿಭಜನೆಯ ರಾಜಕಾರಣದ ಪ್ರಯೋಗ ಶಾಲೆಯಾಗಿರುವ ಬಂಟ್ವಾಳದಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜಾತ್ಯತೀತ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಪಿಐಎಂ ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಬಂಟ್ವಾಳದ ಜನತೆ ಕೋಮುವಾದಿ, ಜನವಿರೋಧಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜನಪರ ರಾಜಕಾರಣಕ್ಕೆ ಅವಕಾಶ ಒದಗಿಸಬೇಕು ಎಂದವರು ಜನತೆಗೆ ಮನವಿ ಮಾಡಿದರು. 

ಈ ಸಂದರ್ಭ ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸದಸ್ಯ ಉದಯ ಕುಮಾರ್ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಜನವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕರ ಆದ್ಯತೆಯಾಗಲಿ : ಮುನೀರ್ ಕಾಟಿಪಳ್ಳ Rating: 5 Reviewed By: karavali Times
Scroll to Top