ಜಿಲ್ಲೆಯಲ್ಲಿ ಕೈ ಪಕ್ಷಕ್ಕಾಗಿರುವ ಹಿನ್ನಡೆ ತಾತ್ಕಾಲಿಕ, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಪಕ್ಷ ಸಂಘಟನೆ : ರಮಾನಾಥ ರೈ ವಿಶ್ವಾಸ - Karavali Times ಜಿಲ್ಲೆಯಲ್ಲಿ ಕೈ ಪಕ್ಷಕ್ಕಾಗಿರುವ ಹಿನ್ನಡೆ ತಾತ್ಕಾಲಿಕ, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಪಕ್ಷ ಸಂಘಟನೆ : ರಮಾನಾಥ ರೈ ವಿಶ್ವಾಸ - Karavali Times

728x90

16 May 2023

ಜಿಲ್ಲೆಯಲ್ಲಿ ಕೈ ಪಕ್ಷಕ್ಕಾಗಿರುವ ಹಿನ್ನಡೆ ತಾತ್ಕಾಲಿಕ, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಪಕ್ಷ ಸಂಘಟನೆ : ರಮಾನಾಥ ರೈ ವಿಶ್ವಾಸ

 ಮಂಗಳೂರು, ಮೇ 16, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಜಿಲ್ಲೆಯ ಕಾರ್ಯಕರ್ತರು ಎದೆಗುಂದಬೇಕಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರಿಗೆ ಎಲ್ಲವೂ ಅರ್ಥ ಆಗಲಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

  ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಸ್ಪಷ್ಟ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಅನೈತಿಕವಾಗಿ ಶಾಸಕರ ಖರೀದಿ ಮೊದಲಾದ ವಾಮಮಾರ್ಗಗಳ ಮೂಲಕವಷ್ಟೆ ಬಿಜೆಪಿ ಅಧಿಕಾರ ಪಡೆದಿದೆಯಷ್ಟೆ ಎಂದ ರೈ  ಬಹುಮತದ ಕಾಂಗ್ರೆಸ್ ಸರಕಾರ ಪ್ರಮಾಣ ವಚನ ಸ್ವೀಕಾರ ಆದ ತಕ್ಷಣ ಜನತೆಗೆ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ. ಜನರ ಪ್ರೀತಿಗೆ ಬದ್ದತೆ ತೋರುವುದೇ ಪಕ್ಷದ ಮೊದಲ ಆದ್ಯತೆ ಎಂದರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಸ್ವಾರ್ಥಕ್ಕಾಗಿ ಜಿ ಪಂ, ತಾ ಪಂ ಚುನಾವಣೆ ಮುಂದೂಡಿದೆ. ಚುನಾವಣೆ ನಡೆಸದೆಯೇ ಜನವಿರೋಧಿ ಬಿಜೆಪಿ ಸರಕಾರ ಪತನ ಆಗಿದೆ. ಮುಂದಿನ ಒಂದೆರಡು ತಿಂಗಳಲ್ಲೇ ಕಾಂಗ್ರೆಸ್ ಸರಕಾರ ಈ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯಾಡಳಿತದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದ ಮಾಜಿ ಸಚಿವರು, ಕಾಂಗ್ರೆಸ್ ಸರಕಾರದ ಯೋಜನೆಗಳು ಅತೀ ಹೆಚ್ಚಾಗಿ ಅವಿಭಜಿತ ದ ಕ ಜಿಲ್ಲೆಯ ಜನರಿಗೆ ತಲುಪಿದೆ. ಭೂ ಮಸೂದೆ ಯೋಜನೆ, 94 ಸಿ, 94 ಸಿಸಿ ಹಕ್ಕು ಪತ್ರಗಳು, ಬಗರ್ ಹುಕುಂ ಸಾಗುವಳಿ ಚೀಟಿ ಮೊದಲಾದ ಯೋಜನೆಗಳು ಜಿಲ್ಲೆಯ ಜನರಿಗೆ ಅತೀ ಹೆಚ್ಚು ತಲುಪಿದೆ. ಆದರೂ ಉಭಯ ಜಿಲ್ಲೆಗಳಲ್ಲಿ ಕೈ ಅಭ್ಯರ್ಥಿಗಳಿಗೆ ಸೋಲಾಗಿದೆ. ಈ ಬಗ್ಗೆ ಸೋಲಿನ ವಿಮರ್ಶೆ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬರುವಲ್ಲಿ ಸಹಕರಿಸಿದ ರಾಜ್ಯದ ಎಲ್ಲ ಮತದಾರರಿಗೆ, ಪಕ್ಷದ ಜಿಲ್ಲಾ, ರಾಜ್ಯ ಹಾಗೂ ರಾಷ್ಷ್ರ ಮಟ್ಟದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಜಿಲ್ಲೆಯಲ್ಲಿ ಫಲಿತಾಂಶದಲ್ಲಿ ಮಾತ್ರ ಪಕ್ಷಕ್ಕೆ ಹಿನ್ನಡೆಯಾದರೂ ಮತ‌ಗಳಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. ಬಂಟ್ವಾಳದಲ್ಲಿ ನನಗೆ ಸೋಲಾಗಿದ್ದರೂ ಜನರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. ಸೋಲನ್ನು ಸ್ವೀಕರಿಸಿಕೊಂಡು ಮತ್ತೆ ಜಿಲ್ಲೆಯಲ್ಲಿ ಹೋರಾಟ ಶುರು ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಚುನಾವಣಾ ರಾಜಕೀಯದಿಂದ ದೂರ ಆಗುವ ನಿರ್ಧಾರ ಕೈಗೊಂಡಿದ್ದರೂ ಪಕ್ಷ ಸಂಘಟನೆಯ ಕಾರ್ಯಕ್ರಮದಲ್ಲಿ ಸದಾ ನಾನು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತೇನೆ ಎಂದ ರೈ ಮುಂದಿನ ರಾಜಕೀಯ ನಿರ್ಧಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾನು ಸದಾ ಬದ್ದನಾಗಿದ್ದೇನೆ. ಈ ಹಿಂದೆ ಪಕ್ಷದ ಸೂಚನೆಗೆ ಸದಾ ಬದ್ದನಾಗಿ ಕೆಲಸ ಮಾಡಿದ್ದು, ಮುಂದೆಯೂ ಅದನ್ನು ಯಥಾವತ್ತಾಗಿ ಪಾಲಿಸುತ್ತೇನೆ. ಪಕ್ಷದ ಋಣ ನನ್ನ ಮೇಲೆ ಜೀವನ ಪರ್ಯಂತ ಇರಲಿದ್ದು, ಪಕ್ಷ ಹಾಗೂ ಹೈಕಮಾಂಡ್ ಸೂಚನೆ ಪಾಲಿಸಿ ಎಲ್ಲವನ್ನೂ ಮಾಡುತ್ತೇನೆ ಎಂದವರು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.

ಈ ಸಂದರ್ಭ ಪಕ್ಷ ಪ್ರಮುಖರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೋ, ರಕ್ಷಿತ್ ಶಿವರಾಂ, ಕೆ ಕೆ ಶಾಹುಲ್ ಹಮೀದ್, ನವೀನ್ ಡಿಸೋಜ, ಉಮೇಶ್ ದಂಡಿಕೆರೆ, ಪೃಥ್ವಿರಾಜ್, ಹೊನ್ನಯ್ಯ, ಕೆ ಅಶ್ರಫ್, ನಝೀರ್ ಬಜಾಲ್ ಮೊದಲಾದವರು ಜೊತೆಗಿದ್ದರು

  • Blogger Comments
  • Facebook Comments

0 comments:

Post a Comment

Item Reviewed: ಜಿಲ್ಲೆಯಲ್ಲಿ ಕೈ ಪಕ್ಷಕ್ಕಾಗಿರುವ ಹಿನ್ನಡೆ ತಾತ್ಕಾಲಿಕ, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಪಕ್ಷ ಸಂಘಟನೆ : ರಮಾನಾಥ ರೈ ವಿಶ್ವಾಸ Rating: 5 Reviewed By: karavali Times
Scroll to Top