ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ : ದ.ಕ. ಜಿಲ್ಲೆಯ ಕೈ ಕಾರ್ಯಕರ್ತರ ಅನಾಥ ಪ್ರಜ್ಞೆಗೆ ಇತಿಶ್ರೀ ಹಾಡಲು ಹಿರಿಯ ಮುತ್ಸದ್ದಿ ರಮಾನಾಥ ರೈಗೆ ಸಚಿವ ಸ್ಥಾನ? - Karavali Times ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ : ದ.ಕ. ಜಿಲ್ಲೆಯ ಕೈ ಕಾರ್ಯಕರ್ತರ ಅನಾಥ ಪ್ರಜ್ಞೆಗೆ ಇತಿಶ್ರೀ ಹಾಡಲು ಹಿರಿಯ ಮುತ್ಸದ್ದಿ ರಮಾನಾಥ ರೈಗೆ ಸಚಿವ ಸ್ಥಾನ? - Karavali Times

728x90

15 May 2023

ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ : ದ.ಕ. ಜಿಲ್ಲೆಯ ಕೈ ಕಾರ್ಯಕರ್ತರ ಅನಾಥ ಪ್ರಜ್ಞೆಗೆ ಇತಿಶ್ರೀ ಹಾಡಲು ಹಿರಿಯ ಮುತ್ಸದ್ದಿ ರಮಾನಾಥ ರೈಗೆ ಸಚಿವ ಸ್ಥಾನ?

ಅವಿಭಜಿತ ಕರಾವಳಿ ಜಿಲ್ಲೆಯ ಕೈ ಅಭ್ಯರ್ಥಿಗಳ ಪೈಕಿ ರೈ ನಿಕಟ ಸ್ಪರ್ಧೆ ನೀಡಿದ ಹಿನ್ನಲೆಯಲ್ಲಿ ಹೈಕಮಾಂಡಿನಿಂದ ಈ ಸಿದ್ದತೆ? 


ಮಂಗಳೂರು, ಮೇ 15, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಅನೈತಿಕ ಸರಕಾರದ ಜನವಿರೋಧಿ ನೀತಿಯಿಂದ ಕಂಗೆಟ್ಟ ಜನ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬುಡಸಮೇತ ಕತ್ತರಿಸಿ ಹಾಕುವಲ್ಲಿ ಸಫಲರಾಗಿದ್ದಾರೆ. ಅದರಲ್ಲೂ ಬೊಮ್ಮಾಯಿ ಸಂಪುಟದ ಘಟಾನುಘಟಿ ನಾಯಕರಿಗೆ ಸೋಲಿನ ರುಚಿ ತೋರಿಸಿದ ಮತದಾರ ಜನರ ತಾಳ್ಮೆ ಪರೀಕ್ಷಿಸಿ ಅಧಿಕಾರದ ಅಮಲಿನಲ್ಲಿ ತೇಲಾಡುವ ಜನಪ್ರತಿನಿಧಿಗಳಿಗೆ ತಕ್ಕ ಪಾಠವನ್ನೇ ತೋರಿದ್ದಾರೆ. ಪರಿಣಾಮ ಬರೋಬ್ಬರಿ 135+ ಸ್ಥಾನಗಳೊಂದಿಗೆ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸ್ವಂತ ಬಲದಲ್ಲಿ ಸರಕಾರ ರಚನೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. 

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನವಿರೋಧಿ ಆಡಳಿತದ ಮೂಲಕ ಜನರ ತಾಳ್ಮೆ ಪರೀಕ್ಷಿಸಿದ ಬಿಜೆಪಿ ಪಕ್ಷವನ್ನು ಹಾಗೂ ಅವಕಾಶ ರಾಜಕಾರಣ ಮಾಡುತ್ತಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನೂ ಕೂಡಾ ತಿರಸ್ಕರಿಸಿದ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದಾನಾದರೂ ಕರಾವಳಿ ಜಿಲ್ಲೆಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಲ್ಲೆಯ ಜನ ಮಾತ್ರ ಇನ್ನೂ ಕೂಡಾ ಕೋಮುವಾದ ಮನಸ್ಥಿತಿಯಿಂದ ಹೊರಬರದೆ ಇರುವ ಕಾರಣದಿಂದಾಗಿ ಇಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯನ್ನು ಕಂಡು ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯ 8 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡರೆ, ಕಾಂಗ್ರೆಸ್ ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಪಕ್ಷೇತರರ ಮಧ್ಯೆ ನಡೆದ ಜಿದ್ದಿನಿಂದ ಗೆದ್ದು ಬಂದಿರುವ ಅಶೋಕ್ ರೈ ಕಾಂಗ್ರೆಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಎಲ್ಲ ಕೈ ಉಮೇದುವಾರರು ಸೋತು ಗಂಟುಮೂಟೆ ಕಟ್ಟಿಕೊಂಡಿದ್ದಾರೆ. 

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಬಹುತೇಕ ಅಭ್ಯರ್ಥಿಗಳು ಹೀನಾಯವಾಗಿ ಸೋತರೆ, ಹಿಂದುತ್ವ, ಕೋಮುವಾದ ಈ ಎಲ್ಲದರ ಮಧ್ಯೆ ಬಂಟ್ವಾಳದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು ಮಾತ್ರ ಎದುರಾಳಿ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಯು ರಾಜೇಶ್ ನಾಯಕ್ ವಿರುದ್ದ ಅಲ್ಪ ಅಂತರದಲ್ಲಿ ಸೋತಿದ್ದಾರೆ. ಅಲ್ಲದೆ ಕಳೆದ ಬಾರಿಗಿಂತ ಈ ಬಾರಿ ತನ್ನ ಸೋಲಿ ಅಂತರವನ್ನು ಕಡಿಮೆಗೊಳಿಸುವ ಮೂಲಕ ಇದ್ದುದರಲ್ಲಿ ಸೈ ಎನಿಸಿಕೊಂಡಿದ್ದಾರೆ. 

ಬಂಟ್ವಾಳದಲ್ಲಿ ಸತತ 9 ಬಾರಿ ಕೈ ಪಕ್ಷದಿಂದ ಸ್ಪರ್ಧಿಸಿರುವ ರಮಾನಾಥ ರೈ ಅವರು ಕಳೆದ ಬಾರಿಯ ಸೋಲಿನ ಬಳಿಕ ಒಂದು ದಿನವೂ ಮನೆಯಲ್ಲಿ ಕೂರದೆ ನಿರಂತರ ಕ್ಷೇತ್ರ ಸಂಚಾರ ನಡೆಸುವ ಮೂಲಕ ಕ್ಷೇತ್ರದ ಮತದಾರರ ಎಲ್ಲ ಕಷ್ಟ-ಸುಖಗಳಿಗೆ, ಆಗು-ಹೋಗುಗಳಿಗೆ ಸ್ಪಂದಿಸುವ ಮೂಲಕ ಜನರ ನಡುವೆ ಆಹೋರಾತ್ರಿ ಬೆರೆತುಕೊಂಡಿದ್ದರು. ಅಲ್ಲದೆ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಂತೂ ಕ್ಷೇತ್ರಾದ್ಯಂತ ಸಂಚರಿಸಿ ಕೋರೋನಾ ಪೀಡಿತರಿಗೆ ಹಾಗೂ ಬಡ-ಬಗ್ಗರಿಗೆ ರೇಷನ್ ಕಿಟ್ ಹಾಗೂ ಔಷಧಿ ಕಿಟ್ ಗಳನ್ನು ವಿತರಿಸಿ ಆ ಮೂಲಕವೂ ಜನರಿಗೆ ಸ್ಪಂದಿಸುವ ಕಾರ್ಯವನ್ನು ಮಾಡಿದ್ದರು. ಈ ಬಾರಿ ಬಂಟ್ವಾಳದಲ್ಲಿ ರಮಾನಾಥ ರೈ ಗೆಲುವು ಖಚಿತ ಎಂದೇ ಹೇಳಲಾಗಿತ್ತು. ಆದರೂ ಕೂಡಾ ರೈಗಳು ಅಲ್ಪ ಅಂತರದಲ್ಲಿ ಸೋಲುಂಡಿದ್ದಾರೆ. ರೈಗಳು ತನ್ನ ಗೆಲುವಿಗೆ ಪೂರಕವಾದ ಎಲ್ಲ ಕೆಲಸಗಳನ್ನು ಸ್ವತಃ ನಿರ್ವಹಿಸಿದ್ದಾರಾದರೂ ರೈಗಳ ಅನಿವಾರ್ಯತೆಯನ್ನು ಕ್ಷೇತ್ರದ ಜನರ ಮನಸ್ಸಿಗೆ ತಲುಪಿಸುವಲ್ಲಿ ಪಕ್ಷದ ಮುಂಚೂಣಿ ಘಟಕದ ನಾಯಕರೆನಿಸಿಕೊಂಡವರು ವಿಫಲರಾದರು ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ರೈಗಳ ಸೋಲಿನ ವಿಮರ್ಶೆ ಇದೀಗ ಸಾಗುತ್ತಿದೆ. 

ಈ ಮಧ್ಯೆ ಕಾರ್ಯಕರ್ತರ ನಿಯೋಗ ರಾಜ್ಯದ ಕಾಂಗ್ರೆಸ್ ನಾಯಕರುಗಳಿಗೆ ವಿಶೇಷವಾಗಿ ಮನವಿ ಮಾಡುವ ಮೂಲಕ ಪೂರ್ಣ ಪ್ರಮಾಣದ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕೈ ಸರಕಾರದಲ್ಲಿ ಸೂಕ್ತ ಸ್ಥಾನಮಾನ-ಗೌರವ ನೀಡಬೇಕು. ಕೋಮವಾದಿಗಳ ಪ್ರಯೋಗ ಶಾಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಜನರ ಸೇವೆಗೆ ರಮಾನಾಥ ರೈ ಅವರಂತಹ ಮುತ್ಸದ್ದಿ ರಾಜಕಾರಣಿ ಸದಾ ಬೇಕು ಎಂಬ ನೆಲೆಯಲ್ಲಿ ಅವರನ್ನು ಎಂಎಲ್ಸಿ ಮಾಡುವ ಮೂಲಕ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಇಲಾಖೆಯ ಸಚಿವರನ್ನಾಗಿ ಮಾಡುವ ಮೂಲಕ ಜಿಲ್ಲೆಯಲ್ಲಿ ಅನಾಥರಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಆಕ್ಸಿಜನ್ ನೀಡುವಂತೆ ಆಗ್ರಹಿಸಿದ್ದಾರೆ. ಸೋಲಿನ ಕಾರಣ ವಿಮರ್ಶೆ ನಡೆಸುತ್ತಿರುವ ಮಧ್ಯೆಯೇ ಪಕ್ಷದ ಪ್ರಮುಖ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರ ಕೂಗಿಗೆ ಧ್ವನಿಯಾಗುವ ಮೂಲಕ ತಕ್ಷಣ ಈ ಬೇಡಿಕೆಯನ್ನು ಈಡೇರಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೂಡಾ ಬದಲಾಯಿಸಿ ಅದರ ಜವಾಬ್ದಾರಿ ರೈಗಳಿಗೆ ನೀಡಬೇಕು. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಪಕ್ಷದ ಏಳಿಗೆಯ ಉದ್ದೇಶದಿಂದ ಡಿಸಿಸಿ ಸಹಿತ ಎಲ್ಲಾ ಬ್ಲಾಕ್, ವಲಯ, ಬೂತ್ ಮಟ್ಟದ ನಾಯಕರನ್ನು ಬದಲಾಯಿಸಿ ಪಕ್ಷಕ್ಕಾಗಿ ನಿಸ್ವಾರ್ಥ ಹಾಗೂ ಮೈಚಳಿ ಬಿಟ್ಟು ಕೆಲಸ ಮಾಡುವ ಪಾದರಸ ಚಲನೆಯ ಯುವಕರಿಗೆ ಜವಾಬ್ದಾರಿ ನೀಡಿ ರೈಗಳ ನೇತೃತ್ವದಲ್ಲಿ ಮತ್ತೆ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಲು ಅನುವು ಮಾಡಿಕೊಡಬೇಕು ಎಂದು ಕೂಡಾ ಕಾರ್ಯಕರ್ತರು ನಾಯಕರಿಗೆ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ : ದ.ಕ. ಜಿಲ್ಲೆಯ ಕೈ ಕಾರ್ಯಕರ್ತರ ಅನಾಥ ಪ್ರಜ್ಞೆಗೆ ಇತಿಶ್ರೀ ಹಾಡಲು ಹಿರಿಯ ಮುತ್ಸದ್ದಿ ರಮಾನಾಥ ರೈಗೆ ಸಚಿವ ಸ್ಥಾನ? Rating: 5 Reviewed By: karavali Times
Scroll to Top