ಬಂಟ್ವಾಳ, ಜೂನ್ 15, 2023 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ಬಗ್ಗೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಗತಿಪರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ಬುಧವಾರ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.
ಬಂಟ್ವಾಳ ತಾಲೂಕು ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಕ್ಷರ ದಾಸೋಹ ಉದ್ಯೋಗಿ ಯಶೋದ ಅವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷರ ಕುಮ್ಮಕ್ಕಿನಿಂದ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಎಐಸಿಸಿಟಿಯು ಆರೋಪಿಸಿದೆ.
ಅಕ್ಷರ ದಾಸೋಹ ಉದ್ಯೋಗಿ ಯಶೋಧ ಅವರು ಕಳೆದ 20 ವರ್ಷಗಳಿಂದ ಸರಕಾರದ ನಿಯಮಾನುಸಾರ ಕೆಲಸ ನಿರ್ವಹಿಸುತ್ತಿದ್ದು, ಮೇ 31 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಕೆಲಸದಿಂದ ವಜಾ ಮಾಡಲು ತಿಳಿಸಿದ್ದಾಗಿ ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ. ಈ ಬಗ್ಗೆ ಯಶೋಧ ಅವರು ಮೌಖಿಕವಾಗಿ ಅಧಿಕಾರಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಲಾಗಿದೆ.
ಈ ಹಿನ್ನಲೆಯಲ್ಲಿ ಬುಧವಾರ ಅಕ್ಷರ ದಾಸೋಹ ನೌಕರರ ಸಂಘದಿಂದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಯಾವುದೇ ಕಾರಣ ನೀಡದೇ ಕೆಲಸದಿಂದ ವಜಾ ಮಾಡಿರುವವರ ಮೇಲೆ ಕ್ರಮ ಕೈಗೊಂಡು ಕೂಡಲೇ ಯಶೋದ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು. ತಪ್ಪಿದಲ್ಲಿ ತೀವ್ರ ಹೋರಾಟ ಸಂಘಟಿಸುವುದಾಗಿ ಸಂಘ ಎಚ್ಚರಿಸಿದೆ.
ದೂರು ನೀಡಿದ ನಿಯೋಗದಲ್ಲಿ ಎಐಸಿಸಿಟಿಯು ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಉಪಾದ್ಯಕ್ಷ ರಾಜಾ ಚೆಂಡ್ತಿಮಾರ್, ಯಶೋಧ, ಇಬ್ರಾಹಿಂ ಮೈಂದಾಳ, ಉಮೇಶ್ ವಾಮದಪದವು, ಪ್ರಮೀಳ ಮೊದಲಾದವರಿದ್ದರು.
0 comments:
Post a Comment