ಬೆಂಗಳೂರು, ಜೂನ್ 15, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ.) ಯ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಬಸ್ ಪಾಸ್ ಪಡೆಯಲು ಕರ್ನಾಟಕ ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 12 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಕಾಲಾವಕಾಶ ಬೇಕಾಗಿರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲತೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಹಿಂದಿನ ಪಾಸ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ನಿಗಮ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳು ಹೊಸ ಬಸ್ ಪಾಸ್ ಪಡೆಯಲು ಅನುಕೂಲ ಹಾಗೂ ಕಾಲಾವಕಾಶ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಜೂನ್ 30ರವರೆಗೆ ಪ್ರಸಕ್ತ ವರ್ಷ ಶಾಲಾ-ಕಾಲೇಜಿಗೆ ದಾಖಲಾಗಿರುವ ಬಗ್ಗೆ ಶುಲ್ಕ ಪಾವತಿ ರಶೀದಿ ಅಥವಾ ಕಳೆದ ವರ್ಷದ ಬಸ್ ಪಾಸನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಅದೇ ರೀತಿ “ಶಕ್ತಿ ಯೋಜನೆಯಡಿ” ವಿದ್ಯಾರ್ಥಿನಿಯರು ರಾಜ್ಯದೊಳಗೆ ಪ್ರಯಾಣಿಸುವಾಗ ಸರಕಾರದಿಂದ ವಿತರಿಸಲಾಗಿರುವ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment