ಬಂಟ್ವಾಳ, ಜೂನ್ 10, 2023 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದೇವರಮನೆ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಪಿಕಾಡ್ ನಿವಾಸಿ ದಿವಂಗತ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬಾತನದ್ದೆಂದು ಮನೆ ಮಂದಿ ಗುರುತಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದು (ಜೂನ್ 10 ಶನಿವಾರ) ಸಂಜೆ 5 ಗಂಟೆಗೆ ಇರಾ ಗ್ರಾಮದ ಕಾಪಿಕಾಡಿನಲ್ಲಿರುವ ಮನೆಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಗಾಂಜಾ ವ್ಯಸನಕ್ಕೆ ತುತ್ತಾಗಿದ್ದ ಸವಾದ್ ಕಳೆದ ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಮನೆಯವರ ಸಂಪರ್ಕ ಕಳೆದುಕೊಂಡಿದ್ದ. ಗುರುವಾರ ಸಂಜೆ ಚಾರ್ಮಾಡಿ ಘಾಟ್ ಪ್ರದೇಶದ ಗುಡ್ಡದಲ್ಲಿ ಯುವಕನ ಕೊಳೆತ ಮೃತದೇಹ ಪತ್ತೆಯಾಗಿದ್ದು, ಇದು ಸವಾದ್ ಮೃತದೇಹ ಎಂದು ಮನೆ ಮಂದಿ ಗುರುತಿಸಿದ್ದರು.
ಸದ್ಯ ಇದೊಂದು ಅಸಹಜ ಸಾವೆಂದು ಬಣಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಿದ್ದಾರೆ. ಅಲ್ಲಿವರೆಗೂ ಪ್ರಕರಣದ ಬಗ್ಗೆ ಯಾವುದೇ ಸುಳಿವನ್ನು ಪೊಲೀಸರನ್ನು ನೀಡುತ್ತಿಲ್ಲ. ಇದೊಂದು ಗಾಂಜಾ ಗ್ಯಾಂಗಿಗೆ ಸಂಬಂಧಪಟ್ಟಂತೆ ನಡೆದ ಯೋಜಿತ ಕೊಲೆ ಎಂದು ಶಂಕಿಸಲಾಗಿದ್ದು, ಈತನ ಸ್ನೇಹಿತರ ಬಗ್ಗೆಯೂ ಈಗಾಗಲೇ ಬಂಟ್ವಾಳದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಸಮಾರು 10 ದಿನಗಳ ಹಿಂದೆ ಕೊಲೆ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಕೊಲೆ ನಡೆಸಿ ಬಳಿಕ ಗುರುತಿ ಸಿಗದಂತೆ ಮುಖವನ್ನು ಸುಟ್ಟು ಹಾಕುವ ಪ್ರಯತ್ನ ನಡೆಸಲಾಗಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಪೊಲೀಸರ ತನಿಖೆಯ ಬಳಿಕ ಯುವಕನ ಸಾವಿನ ನಿಜಾಂಶ ಬಯಲಾಗಲಿದೆ. ಈಗಾಗಲೇ ಮೃತನ ಮನೆಗೆ ಭೇಟಿ ನೀಡಿರುವ ಸ್ಥಳೀಯ ಶಾಸಕ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಜಿಲ್ಲೆಯ ಡ್ರಗ್ಸ್ ಜಾಲ ಬೇಧಿಸಲು ಬೇಕಾದ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ವಿಶೇಷ ಪೊಲೀಸ್ ತಂಡ ರಚಿಸಿ ಯುವಕನ ಕೊಲೆ ರಹಸ್ಯ ಬೇಧಿಸುವಂತೆಯೂ ಅವರು ಪೊಲೀಸರಿಗೆ ತಾಕೀತು ಮಾಡಿದ್ದಾರೆ.
0 comments:
Post a Comment