ಮುಂಬೈ, ಜೂನ್ 27, 2023 (ಕರಾವಳಿ ಟೈಮ್ಸ್) : ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಮಂಗಳವಾರ (ಜೂನ್ 27) ಪ್ರಕಟಗೊಂಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಕಪ್-2023 ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದ್ದು, ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದು, ತನ್ನ ಬದ್ದ ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ದದ ಹೈವೋಲ್ಟೇಜ್ ಪಂದ್ಯವನ್ನು ಅಕ್ಟೋರ್ 15 ರಂದು ಅಹಮದಾಬಾದಿನಲ್ಲಿ ಆಡಲಿದೆ.
ಟೀಮ್ ಇಂಡಿಯಾ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕ್ವಾಲಿಫೈಯರ್ 1, ಕ್ವಾಲಿಫೈಯರ್ 2 ತಂಡಗಳ ವಿರುದ್ಧ ಸಹಿತ ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನದ ಆಕ್ಷೇಪಗಳ ಹೊರತಾಗಿಯೂ, ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್‍ನಲ್ಲೇ ನಡೆಯಲಿದೆ ಎಂದು ತೀರ್ಮಾನಿಸಲಾಗಿದೆ. ಆರಂಭದಲ್ಲಿ ಪಾಕಿಸ್ತಾನ ಭಾರತ ವಿರುದ್ದದ ಪಂದ್ಯವನ್ನು ಚೆನ್ನೈ, ಬೆಂಗಳೂರು ಅಥವಾ ಕೋಲ್ಕತ್ತಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಮಂಗಳವಾರ ಪಾಕಿಸ್ತಾನ ಅಹ್ಮದಾಬಾದಿನಲ್ಲಿ ಪಂದ್ಯವನ್ನು ಆಡಲು ಒಪ್ಪಿಗೆ ಸೂಚಿಸಿದ ಬಳಿಕ ವಿಶ್ವಕಪ್ ವೇಳಾಪಟ್ಟಿ ಅಂತಿಮಗೊಳಿಸಲಾಗಿದೆ.
ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ 1,30,000 ಪ್ರೇಕ್ಷಕರಿಗೆ ಆತಿಥ್ಯ ವಹಿಸುತ್ತದೆ. ಇಲ್ಲಿ ಭಾರತ-ಪಾಕ್ ಪಂದ್ಯ ನಡೆದರೆ ಸ್ಟೇಡಿಯಂ ಹೌಸ್‍ಫುಲ್ ಆಗಲಿದ್ದು, ಟಿಕೆಟ್‍ಗಳು ಸಂಪೂರ್ಣ ಮಾರಾಟವಾಗುವ ನಿರೀಕ್ಷೆಯಿದೆ. ಹೀಗಾಗಿ ಇಂಡೋ-ಪಾಕ್ ಪಂದ್ಯವನ್ನು ಇಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಟೂರ್ನಿಯ ಉದ್ಘಾಟನಾ ಪಂದ್ಯ ಅಕ್ಟೋಬರ್ 5 ರಂದು ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ. ಭಾರತ ತಂಡ ತನ್ನ ಪಂದ್ಯಗಳನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ದ ಮೊದಲ ಪಂದ್ಯ ಆಡಲಿದ್ದು, ಬಳಿಕ ಅ 11 ರಂದು ಡೆಲ್ಲಿಯಲ್ಲಿ ಅಫ್ಘಾನಿಸ್ತಾನ ವಿರುದ್ದ, ಅ 15 ರಂದು ಅಹ್ಮದಾಬಾದಿನಲ್ಲಿ ಪಾಕಿಸ್ತಾನ ವಿರುದ್ದ, ಅ 19 ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ದ, ಅ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ, ಅ 29 ರಂದು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ದ, ನವೆಂಬರ್ 2 ರಂದು ಮುಂಬೈಯಲ್ಲಿ ಕ್ವಾಲಿಫೈಯರ್-2 ತಂಡದ ವಿರುದ್ದ, ನವೆಂಬರ್ 5 ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಹಾಗೂ ನ 11 ರಂದು ಬೆಂಗಳೂರಿನಲ್ಲಿ ಕ್ವಾಲಿಫೈಯರ್-1 ರ ತಂಡದ ವಿರುದ್ದ ಆಡಲಿದೆ.
0 comments:
Post a Comment