ಶುಕ್ರವಾರ ಬೆಳ್ಳಂಬೆಳಗ್ಗೆ ನಂದಾವರದಲ್ಲಿ ಭಾರೀ ದುರಂತ : ಮನೆ ಮೇಲೆ ಗುಡ್ಡ ಕುಸಿದು ತಾಯಿ ಮೃತ್ಯು, ಪುತ್ರಿ ಗಂಭೀರ - Karavali Times ಶುಕ್ರವಾರ ಬೆಳ್ಳಂಬೆಳಗ್ಗೆ ನಂದಾವರದಲ್ಲಿ ಭಾರೀ ದುರಂತ : ಮನೆ ಮೇಲೆ ಗುಡ್ಡ ಕುಸಿದು ತಾಯಿ ಮೃತ್ಯು, ಪುತ್ರಿ ಗಂಭೀರ - Karavali Times

728x90

6 July 2023

ಶುಕ್ರವಾರ ಬೆಳ್ಳಂಬೆಳಗ್ಗೆ ನಂದಾವರದಲ್ಲಿ ಭಾರೀ ದುರಂತ : ಮನೆ ಮೇಲೆ ಗುಡ್ಡ ಕುಸಿದು ತಾಯಿ ಮೃತ್ಯು, ಪುತ್ರಿ ಗಂಭೀರ

ಬಡ ಕುಟುಂಬಕ್ಕೆ ಸರಕಾರ ಗರಿಷ್ಠ ಪರಿಹಾರ ನೀಡಲು ಸ್ಥಳೀಯರ ಆಗ್ರಹ, ಸಂಭಾವ್ಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತೆಗಾಗಿಯೂ ಮನವಿ


ಬಂಟ್ವಾಳ, ಜುಲೈ 07, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ಶುಕ್ರವಾರ ಮುಂಜಾನೆಯೇ ಭಾರೀ ದುರಂತ ಸಂಭವಿಸಿದ್ದು, ನಿರಂತರ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದವರ ಪೈಕಿ ಮಹಿಳೆ ಮೃತಪಟ್ಟಿದ್ದು, ಪುತ್ರಿಯನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ-ಪೊಲೀಸರು ಹರಸಾಹಸ ಪಟ್ಟು ರಕ್ಷಣೆ ಮಾಡಲಾಗಿದ್ದರೂ ಆಕೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

ಸ್ಥಳೀಯ ನಿವಾಸಿ ಮುಹಮ್ಮದ್ ಅವರ ಪತ್ನಿ ಝರೀನಾ (49) ಅವಘಡದಲ್ಲಿ ಮೃತಪಟ್ಟಿದ್ದು, ಪುತ್ರಿ  ಸಫಾ (20) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ತಕ್ಷಣದಲ್ಲೇ ಸ್ಥಳೀಯ ಯುವಕರ ತಂಡ ನಿರಂತರ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಕಾರ್ಯಾಚರಣೆಗೆ ಕೈಜೋಡಿಸಿ ಮಣ್ಣಿನಡಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಅದಾಗಲೇ ಮಹಿಳೆ ಝರೀನಾ ಮೃತಪಟ್ಟಿದ್ದಾರೆ. ಪುತ್ರಿ ಸಫಾ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಘಟನಾ ಸ್ಥಳಕ್ಕೆ ಬಂಟ್ವಾಳ ತಾಲೂಕು ತಹಶೀಲ್ದಾರ್ ಬಿ ಎಸ್ ಕೂಡಲಗಿ ಸಹಿತ ಕಂದಾಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದಾರೆ. 

ಬಡ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಆಗ್ರಹ

ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಈ ಅವಘಡ ಸಂಭವಿಸಿದ್ದು, ಮನೆಯ ಹಿರಿಯ ಜೀವವನ್ನೂ ಹಾಗೂ ವಾಸದ ಮನೆಯನ್ನೂ ಕಳೆದುಕೊಂಡು ಮುಹಮ್ಮದ್ ಅವರ ಬಡ ಕುಟುಂಬ ಇದೀಗ ಕಂಗಾಲಾಗಿದ್ದು, ಸರಕಾರ ತಕ್ಷಣ ಸ್ಪಂದಿಸಿ ಬಡ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ಒದಗಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಾಕೃತಿಕ ವಿಕೋಪ ನಿಧಿಯಿಂದ ನೀಡುವ ಪರಿಹಾರದ ಜೊತೆಗೆ ಮನೆ ನಿರ್ಮಾಣಕ್ಕೂ, ಗಾಯಾಳು ಯುವತಿಯ ಚಿಕಿತ್ಸೆಗೂ ಗರಿಷ್ಠ ಪ್ರಮಾಣದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. 

ಭಾರೀ ಮಳೆ ಸುರಿಯುತ್ತಿರುವ ನಿಟ್ಟಿನಲ್ಲಿ ತಾಲೂಕಿನ ವಿವಿಧೆಡೆ ಇಂತಹ ಸಂಭಾವ್ಯ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ತಾಲೂಕಾಡಳಿತ ಹಾಗೂ ಸ್ಥಳೀಯಾಡಳಿತ ಸೂಕ್ತ ಸಮಯದಲ್ಲಿ ಗುರುತಿಸಿ ಮುಂಜಾಗ್ರತಾ ಕ್ರಮ ವಹಿಸುವಂತೆ ಇದೇ ವೇಳೆ ಸ್ಥಳೀಯರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಶುಕ್ರವಾರ ಬೆಳ್ಳಂಬೆಳಗ್ಗೆ ನಂದಾವರದಲ್ಲಿ ಭಾರೀ ದುರಂತ : ಮನೆ ಮೇಲೆ ಗುಡ್ಡ ಕುಸಿದು ತಾಯಿ ಮೃತ್ಯು, ಪುತ್ರಿ ಗಂಭೀರ Rating: 5 Reviewed By: karavali Times
Scroll to Top