2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದಲೇ ಹೊರಕ್ಕೆ - Karavali Times 2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದಲೇ ಹೊರಕ್ಕೆ - Karavali Times

728x90

2 July 2023

2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದಲೇ ಹೊರಕ್ಕೆ

ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ ಸೋಲುವ ಮೂಲಕ ಅತ್ಯಂತ ಕಳಪೆ ಪ್ರದರ್ಶನದೊಂದಿಗೆ ಹೊರಬಿದ್ದ ಕ್ರಿಕೆಟ್ ದೈತ್ಯರು 


ದುಬೈ, ಜುಲೈ 01, 2023 (ಕರಾವಳಿ ಟೈಮ್ಸ್) : ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಕ್ರಿಕೆಟ್ ದೈತ್ಯರೆಂದೇ ಪ್ರಖ್ಯಾತಿ ಪಡೆದಿದ್ದ ವೆಸ್ಟ್ ಇಂಡೀಸ್ ತಂಡ ಈ ಬಾರಿ ಕ್ರಿಕೆಟ್ ಶಿಶುಗಳೆದುರು ಅಕ್ಷರಶಃ ಮುಗ್ಗರಿಸಿ ಬಿದ್ದಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಮುಗ್ಗಿರಿಸಿ ಬಿದ್ದಿರುವ ವೆಸ್ಟ್ ಇಂಡೀಸ್ ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಅತ್ಯಂತ ಕಳಪೆ ಪ್ರದರ್ಶನದಿಂದಾಗಿ ವೆಸ್ಟ್ ಇಂಡೀಸ್ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ಶನಿವಾರ ಹರಾರೆಯಲ್ಲಿ ನಡೆದ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಸ್ಕಾಟ್‍ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಸ್ಕಾಟ್‍ಲೆಂಡ್ ವಿರುದ್ದ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆಲುವು ವಿಂಡೀಸ್ ತಂಡದ ಏಕದಿನ ವಿಶ್ವಕಪ್ ಕನಸನ್ನು ಜೀವಂತವಾಗಿರಿಸುತ್ತಿತ್ತು. ಆದರೆ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. 

1975 ಹಾಗೂ 1979ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ವೆಸ್ಟ್ ಇಂಡೀಸ್ ಬಳಿಕ ಅಧಿಪತ್ಯ ಸಾಧಿಸುವಲ್ಲಿ ವಿಫಲವಾಗಿದೆ. ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸ್ಕಾಟ್‍ಲೆಂಡ್ ಏಕದಿನ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಅರ್ಹತಾ ಸುತ್ತಿನಲ್ಲಿ ತಲಾ 6 ಅಂಕ ಪಡೆದಿರುವ ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡ ಬಹುತೇಕ ಅರ್ಹತೆ ಪಡೆದಿದೆ. ಆದರೆ ವೆಸ್ಟ್ ಇಂಡೀಸ್, ನೆದರ್ಲೆಂಡ್, ಒಮನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. 

ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ ನೀಡಿದೆ. ಸ್ಕಾಟ್‍ಲೆಂಡ್ ವಿರುದ್ಧ 7 ವಿಕೆಟ್ ಸೋಲು ಅನುಭಿವಿಸಿದ ವೆಸ್ಟ್ ಇಂಡೀಸ್, ನೆದರ್ಲೆಂಡ್ ವಿರುದ್ಧ ಸೂಪರ್ ಓವರ್ ಹೋರಾಟದಲ್ಲಿ ಸೋಲು ಕಂಡಿತು. ಜಿಂಬಾಬ್ವೆ ವಿರುದ್ದ 35 ರನ್ ಸೋಲು ಅನುಭಿಸಿತ್ತು. ಅರ್ಹತಾ ಸುತ್ತಿನಲ್ಲಿನ ಕಳಪೆ ಪ್ರದರ್ಶನ ವಿಂಡೀಸ್ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ಸ್ಕಾಟ್‍ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 181 ರನ್ ಸಿಡಿಸಿತ್ತು. ಆದರೆ ಸ್ಕಾಟ್‍ಲೆಂಡ್ 43.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. 

ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಪ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ವಿಶ್ವಕಪ್ ಪ್ರಧಾನ ಸುತ್ತಿಗೇರಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಯುಎಸ್‍ಎ ಮತ್ತು ನೇಪಾಳ ವಿರುದ್ಧ ಜಯಗಳಿಸಿತ್ತು. ಆದರೆ ಝಿಂಬಾಬ್ವೆ ಹಾಗೂ ನೆದರ್‍ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಇದಾಗ್ಯೂ 2 ಗೆಲುವಿನೊಂದಿಗೆ ಕೆರಿಬಿಯನ್ ಪಡೆ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತಕ್ಕೇರಿತು. ಆದರೆ ಸೂಪರ್ ಸಿಕ್ಸ್‍ನ ಮೊದಲ ಪಂದ್ಯದಲ್ಲೇ ಸ್ಕಾಟ್‍ಲ್ಯಾಂಡ್ ವಿರುದ್ಧ ಪರಾಜಯಗೊಂಡಿದೆ. ಇದರೊಂದಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವ ವೆಸ್ಟ್ ಇಂಡೀಸ್ ತಂಡದ ಕನಸು ಕಮರಿದೆ. ಸೂಪರ್ ಸಿಕ್ಸ್ ಹಂತದಲ್ಲಿ ವೆಸ್ಟ್ ಇಂಡೀಸ್ ಮೂರು ಪಂದ್ಯಗಳಿಂದ ಒಂದೂ ಪಾಯಿಂಟ್ ಪಡೆದಿಲ್ಲ. 1975 ಮತ್ತು 1979ರ ಮೊದಲ ಎರಡು ವಿಶ್ವಕಪ್‍ಗಳಲ್ಲಿ ಅಮೋಘ ರೀತಿಯಲ್ಲಿ ಗೆದ್ದ ವೆಸ್ಟ್ ಇಂಡೀಸ್, 1983ರಲ್ಲಿ ನಡೆದ ಮೂರನೇ ವಿಶ್ವಕಪ್‍ನ ಫೈನಲ್‍ನಲ್ಲಿ ಭಾರತಕ್ಕೆ ಸೋತಿತ್ತು.

ಶ್ರೀಲಂಕಾ ಮತ್ತು ಆತಿಥೇಯ ಜಿಂಬಾಬ್ವೆ ತಂಡಗಳು ಈಗಾಗಲೇ 3 ಪಂದ್ಯಗಳಿಂದ ಆರು ಪಾಯಿಂಟ್ಸ್ ಪಡೆದಿವೆ. ಸ್ಕಾಟ್ಲೆಂಡ್ ಒಟ್ಟು ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದು, ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಪಂದ್ಯಗಳು ಬಾಕಿ ಇರುವ ಕಾರಣ ಆ ತಂಡಕ್ಕೆ ಅರ್ಹತೆಯ ಬಾಗಿಲು ಇನ್ನೂ ತೆರೆದಿದೆ. 

  • Blogger Comments
  • Facebook Comments

0 comments:

Post a Comment

Item Reviewed: 2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದಲೇ ಹೊರಕ್ಕೆ Rating: 5 Reviewed By: karavali Times
Scroll to Top