ಪಕ್ಷೇತರನಾಗಿ ಜನರಿಂದ ಆಯ್ಕೆಯಾಗಿ ಕೈ-ಕಮಲ ಪಾಳಯ ಬದಲಿಸಿ ಎರಡೂ ಅವಧಿಯಲ್ಲಿ ಅಧಿಕಾರದ ಹುದ್ದೆ ಪಡೆದು ಚಾಣಾಕ್ಷ ರಾಜಕಾರಣಿಯಾದ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ - Karavali Times ಪಕ್ಷೇತರನಾಗಿ ಜನರಿಂದ ಆಯ್ಕೆಯಾಗಿ ಕೈ-ಕಮಲ ಪಾಳಯ ಬದಲಿಸಿ ಎರಡೂ ಅವಧಿಯಲ್ಲಿ ಅಧಿಕಾರದ ಹುದ್ದೆ ಪಡೆದು ಚಾಣಾಕ್ಷ ರಾಜಕಾರಣಿಯಾದ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ - Karavali Times

728x90

16 August 2023

ಪಕ್ಷೇತರನಾಗಿ ಜನರಿಂದ ಆಯ್ಕೆಯಾಗಿ ಕೈ-ಕಮಲ ಪಾಳಯ ಬದಲಿಸಿ ಎರಡೂ ಅವಧಿಯಲ್ಲಿ ಅಧಿಕಾರದ ಹುದ್ದೆ ಪಡೆದು ಚಾಣಾಕ್ಷ ರಾಜಕಾರಣಿಯಾದ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ

ಬಂಟ್ವಾಳ, ಆಗಸ್ಟ್ 17, 2023 (ಕರಾವಳಿ ಟೈಮ್ಸ್) : ತಾಲೂಕಿನ ನೆಟ್ಲಮುಡ್ನೂರು ಗ್ರಾಮ ಪಂಚಾಯತಿನ ದ್ವಿತೀಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಪಂಚಾಯತಿನಲ್ಲಿ ಪಕ್ಷೇತರನಾಗಿ ಗೆದ್ದು ಬಂದಿದ್ದ ವ್ಯಕ್ತಿ ಎರಡೂ ಅವಧಿಯಲ್ಲೂ ಬಂಪರ್ ಗಳಿಸುವಲ್ಲಿ ಸಫಲರಾಗಿದ್ದಾರೆ. 

ಕಳೆದ ಬಾರಿ ಬಿಜೆಪಿ ಬೆಂಬಲಿಸಿ ಅಧ್ಯಕ್ಷರಾಗಿದ್ದ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ ಅವರು ಈ ಬಾರಿ ಬಿಜೆಪಿ ತೊರೆದು ಕಾಂಗ್ರೆಸ್ ಸಖ್ಯ ಬಯಸಿ ಉಪಾಧ್ಯಕ್ಷ ಪಟ್ಟ ಅಲಂಕರಿಸಿದರಲ್ಲದೆ ಬಳಿಕ ಅಧಿಕೃತವಾಗಿ ಮಾಜಿ ಸಚಿವ ಬಿ ರಮಾನಾಥ ರೈ ಅವರಿಂದ ಕೈ ಧ್ವಜ ಸ್ವೀಕರಿಸಿ ಕಾಂಗ್ರೆಸ್ ಪಕ್ಷದ ಸೇರಿಕೊಂಡರು. ಈ ಮೂಲಕ ಕಳೆದ ಬಾರಿ ಬಿಜೆಪಿ ಕೈಯಲ್ಲಿದ್ದ ಪಂಚಾಯತ್ ಆಡಳಿತ ಈ ಬಾರಿ ಕೈ ಪಾಳಯಕ್ಕೆ ಬಂದಂತಾಗಿದೆ. ಈ ಬಾರಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಮಿತಾ ಡಿ ಪೂಜಾರಿ ಆಯ್ಕೆಯಾಗಿದ್ದಾರೆ. 

ನೆಟ್ಲಮುಡ್ನೂರು ಗ್ರಾಮ ಪಂಚಾಯತಿನ ಒಟ್ಟು ಸದಸ್ಯ ಬಲ 11. ಕೈ-ಕಮಲ ಬೆಂಬಲಿತರು ಸಮಾನ ಸಂಖ್ಯೆಯಲ್ಲಿ ಚುನಾಯಿತರಾಗಿ ಬಂದಿದ್ದು, ಓರ್ವ ಪಕ್ಷೇತರ ರೂಪದಲ್ಲಿ ಗೆದ್ದು ಬಂದಿದ್ದರು. 

ಗ್ರಾಮ ಪಂಚಾಯತಿನ ಪ್ರಥಮ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಸಂದರ್ಭ ಪಕ್ಷೇತರ ಅಭ್ಯರ್ಥಿ ಸಚ್ಚಿದಾನಂದ ಅಲಿಯಾಸ್ ಪೂಜಾರಿ ಕಮಲ ಪಾಳಯ ಸೇರಿಕೊಂಡು 1 ಮತದ ಅಂತರದಲ್ಲಿ ಗೆದ್ದು ಬಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಕೀಲ ಕೆ ಪೂಜಾರಿ ಅವರು ಉಪಾಧ್ಯಕ್ಷರಾಗಿದ್ದರು. 

ಇದೀಗ ಬುಧವಾರ ನಡೆದ ದ್ವಿತೀಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹುದ್ದೆಯನ್ನು ಕಾಂಗ್ರೆಸ್ ಬೆಂಬಲಿತೆ ಸಮಿತಾ ಡಿ ಪೂಜಾರಿ ಅವರು ಅಲಂಕರಿಸಿದ್ದಾರೆ. 

ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇದೀಗ ಕಳೆದ ಬಾರಿ ಬಿಜೆಪಿ ಬೆಂಬಲಿಸಿ ಅಧ್ಯಕ್ಷರಾಗಿದ್ದ ಸತೀಶ್ ಪೂಜಾರಿ ಈ ಬಾರಿ ಬಿಜೆಪಿ ಸಖ್ಯ ಕೊನೆಗೊಳಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ಉಪಾಧ್ಯಕ್ಷ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಪಕ್ಷೇತರನಾಗಿ ಜನರಿಂದ ಆಯ್ಕೆಯಾಗಿ ಎರಡೂ ಪಕ್ಷಗಳ ಬೆಂಬಲದಿಂದ ಎರಡೂ ಅವಧಿಯಲ್ಲಿ ಹುದ್ದೆಯನ್ನು ಪಡೆದುಕೊಂಡು ತನ್ನ ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ. 

ಸತೀಶ್ ಪೂಜಾರಿ ಅವರು ಈ ಬಾರಿ ಕೈ ಹಿಡಿದಿದ್ದರಿಂದ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಸದಸ್ಯ ಬಲ 5 ರಿಂದ 6 ಕ್ಕೆ ಏರಿಕೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡರೆ, ಬಿಜೆಪಿ ಬೆಂಬಲಿತರ ಬಲ 6 ರಿಂದ 5ಕ್ಕೆ ಇಳಿಕೆಯಾಗಿ ಅಧಿಕಾರ ಕಳೆದುಕೊಂಡಿದೆ. 

ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯತ್ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಕಾರ್ಯನಿರ್ವಹಿಸಿದರೆ, ಪಂಚಾಯತ್ ಪಿಡಿಒ ಅನುಷಾ ಸಹಾಯಕ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. 

ಈ ಮಧ್ಯೆ ಮಾಜಿ ಅಧ್ಯಕ್ಷ ಹಾಲಿ ಉಪಾಧ್ಯಕ್ಷ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ ಅವರು ಬಿಜೆಪಿ ತೊರೆದು ಬುಧವಾರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಸಚಿವ ಬಿ ರಮಾನಾಥ ರೈ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಸತೀಶ್ ಪೂಜಾರಿ ಕೈ ಕುಟುಂಬ ಸೇರಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಪಕ್ಷೇತರನಾಗಿ ಜನರಿಂದ ಆಯ್ಕೆಯಾಗಿ ಕೈ-ಕಮಲ ಪಾಳಯ ಬದಲಿಸಿ ಎರಡೂ ಅವಧಿಯಲ್ಲಿ ಅಧಿಕಾರದ ಹುದ್ದೆ ಪಡೆದು ಚಾಣಾಕ್ಷ ರಾಜಕಾರಣಿಯಾದ ಸಚ್ಚಿದಾನಂದ ಅಲಿಯಾಸ್ ಸತೀಶ್ ಪೂಜಾರಿ Rating: 5 Reviewed By: karavali Times
Scroll to Top