ಬಂಟ್ವಾಳ, ಸೆಪ್ಟೆಂಬರ್ 05, 2023 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಕಸಬಾ ಗ್ರಾಮದ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣಕ್ಕೆ ಕ್ರಿಕೆಟ್ ಆಟವಾಡಲು ಬಂದ ತಂಡವೊಂದು ಶಾಲಾ ಕೊಠಡಿಗಳಿಗೆ ಹಾನಿ ಮಾಡಿ ವಿಕೃತಿ ಮೆರೆದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಅನ್ನಪೂರ್ಣ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಸೆ 3 ರಂದು ಭಾನುವಾರ ಯಾವುದೋ ತಂಡ ಅಕ್ರಮವಾಗಿ ವಿಟ್ಲ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟ ಆಡಿದ ಬಗ್ಗೆ ಸೋಮವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ಆಟವಾಡಲು ಬಂದ ತಂಡ ಶಾಲೆಯ ಎಲ್ಲಾ ತರಗತಿ ಕೋಣೆಗಳ ಬಾಗಿಲಿಗೆ ಮೊಟ್ಟೆ ಒಡೆದು ಒಂದು ತರಗತಿ ಕೋಣೆಯ ಗಾಜನ್ನು ಮತ್ತು ಸೂಚನಾ ಫಲಕದ ಗಾಜನ್ನು ಒಡೆದು ಅದರಲ್ಲಿ ವಿದ್ಯಾರ್ಥಿಗಳು ಬರೆದಂತಹ ಸುಂದರವಾದ ಚಿತ್ರಗಳನ್ನು ಹರಿದು ಬಿಸಾಡಿರುವುದಲ್ಲದೆ ಗೋಡೆಯ ಮೇಲೆ ಅಶ್ಲೀಲವಾದ ಪದಗಳನ್ನು ಬರೆದು, ಟ್ಯೂಬ್ ಲೈಟ್, ಪ್ರಾಥಮಿಕ ಶಾಲೆಯ ಗೇಟ್ ಹಾಗೂ ಅಡುಗೆ ಕೋಣೆಯ ಬಾಗಿಲನ್ನು ಹಾಳುಗೆಡವಿರುತ್ತಾರೆ ಎಂದು ದೂರಿದ್ದಾರೆ.
ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/2023 ಕಲಂ 447, 427 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment