ಬಂಟ್ವಾಳ, ಜನವರಿ 12, 2024 (ಕರಾವಳಿ ಟೈಮ್ಸ್) : ತಾಲೂಕಿನ ಪಿಲಿಮೊಗರು ಗ್ರಾಮದ ವಾಮಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ, ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ ಗಲಾಟೆ ನಡೆದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಂಘದ ಉದ್ಯೋಗಿ ಕೊಡಂಬೆಟ್ಟು ನಿವಾಸಿ ಹರಿಶ್ಚಂದ್ರ (41) ಅವರು ದೂರು ನೀಡಿದ್ದು, ಗುರುವಾರ ಬೆಳಿಗ್ಗೆ ಆರೋಪಿ ರಂಜಿತ್ ಎಂಬಾತ ಹಾಲಿನ ಡಿಪ್ಪೋಗೆ ಬಂದು ಅವಾಚ್ಯವಾಗಿ ಬೈದು ಡಿಪೋದೊಳಗಿದ್ದ ಕಂಪ್ಯೂಟರ್ ಹಾಗೂ ಬಿಎಂಸಿಯನ್ನು ಎಳೆದು ಹಾಕಲು ಪ್ರಯತ್ನಿಸಿ ಕೋಲಿನಿಂದ ಹೊಡೆಯಲು ಬಂದಿರುತ್ತಾನೆ. ಆರೋಪಿ ಇದೇ ರೀತಿ ಈ ಹಿಂದೆಯೂ ಹಲವು ಬಾರಿ ಡಿಪೋದ ಬಳಿ ಬಂದು ನಡೆದುಕೊಂಡಿದ್ದು, ಸಂಘದ ಮಹಾಸಭೆ ವೇಳೆಯೂ ಅವಾಚ್ಯವಾಗಿ ಬೈದಿರುತ್ತಾನೆ ಹಾಗೂ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2024 ಕಲಂ 448, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಪ್ರತಿ ದೂರು ನೀಡಿರುವ ಕುಡಂಬೆಟ್ಟು ನಿವಾಸಿ ರಂಜಿತ್ (38) ಅವರು, ಗುರುವಾರ ಬೆಳಿಗ್ಗೆ ಹಾಲಿನ ಡೈರಿಗೆ ನಾನು ಹಾಲು ನೀಡಲು ತೆರಳಿದ್ದ ಸಂದರ್ಭ ಅರ್ಜಿಯೊಂದರ ಬಗ್ಗೆ ಡೈರಿಯ ಸಿಬ್ಬಂದಿ ಗುರುಪ್ರಸಾದ್ ಭಟ್ ಅವರಲ್ಲಿ ಚರ್ಚಿಸಿದ್ದು, ಈ ಸಂದರ್ಭ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿ ಹರಿಶ್ಚಂದ್ರ ಶೆಟ್ಟಿ ಹಾಗೂ ಸೊಸೈಟಿ ಅಧ್ಯಕ್ಷ ಗೋಪಾಲ ಚೌಟ ಅವರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ ಗೋಪಾಲ ಚೌಟ ಅವರು ಫೈಬರ್ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2024 ಕಲಂ 323, 324, 504, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment