ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಜಾರಿಗೆ ತರಬೇಕು, ಕಾಂಗ್ರೆಸ್ ಸರಕಾರ ಅದನ್ನು ಮಾಡುತ್ತಿದೆ : ಸಿಎಂ ಸಿದ್ದರಾಮಯ್ಯ - Karavali Times ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಜಾರಿಗೆ ತರಬೇಕು, ಕಾಂಗ್ರೆಸ್ ಸರಕಾರ ಅದನ್ನು ಮಾಡುತ್ತಿದೆ : ಸಿಎಂ ಸಿದ್ದರಾಮಯ್ಯ - Karavali Times

728x90

12 January 2024

ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಜಾರಿಗೆ ತರಬೇಕು, ಕಾಂಗ್ರೆಸ್ ಸರಕಾರ ಅದನ್ನು ಮಾಡುತ್ತಿದೆ : ಸಿಎಂ ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ಸರಕಾರದ ಐದನೇ ಗ್ಯಾರಂಟಿ “ಯುವ ನಿಧಿ” ಯೋಜನೆಗೆ ಚಾಲನೆ 


ಶಿವಮೊಗ್ಗ, ಜನವರಿ 12, 2024 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಐದನೇ ಗ್ಯಾರಂಟಿ ಯೋಜನೆಯಾಗಿರುವ “ಯುವ ನಿಧಿ” ಯೋಜನೆಗೆ ಶುಕ್ರವಾರ ಶಿವಮೊಗ್ಗದಲ್ಲಿ ಲಕ್ಷಾಂತರ ಯುವ ಸಮೂಹದ ಸಮ್ಮುಖದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉದ್ಘಾಟಿಸಿದರು. 

ಈ ಸಂದರ್ಭ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ-ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದರು. 

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ಣ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ. ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂಪಾಯಿ ತಲುಪಿಸುತ್ತಿದ್ದೇವೆ.  ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರಕಾರ ಎಂದರು. 

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ-ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. 

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು. ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನಚಳವಳಿ ನಡೆಯಲಿ ಎಂದು ಹೇಳಿದರು. 

ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯದ ತತ್ವದಂತೆ ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿ ಮಾಡಿದೆ. ಎಂದ ಸಿಎಂ 1.18 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿರುವುದು ಸತ್ಯವಲ್ಲವೇ? ಇದುವರೆಗೆ ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿಲ್ಲದೇ ಮಹಿಳೆಯರು ಶಕ್ತಿ ಯೋಜನೆಯಡಿ 130 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿರುವುದು ಸುಳ್ಳಾಗಲು ಸಾಧ್ಯವೇ? 200 ಯೂನಿಟ್ ವರೆಗೆ ಉಚಿತ ವಿದ್ಯುತ್ 1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ  170 ರೂಪಾಯಿ ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಲಿ ಎಂದು ಸವಾಲು ಹಾಕಿದರು. 

ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಮಾಸಿಕ 4 ರಿಂದ 5 ಸಾವಿರ ರೂಪಾಯಿಗಳು ಸೇರುತ್ತಿದ್ದು, ವರ್ಷಕ್ಕೆ 48 ರಿಂದ 50 ಸಾವಿದ ರೂಪಾಯಿಗಳು ಸೇರುತ್ತದೆ. ಇದು  ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು, ಬಡವರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಈ ಯೋಜನೆಗಳು ಹೆಚ್ಚಿಸುತ್ತವೆ ಎಂದರು. 

ಇಂದು ನಮ್ಮ ಸರಕಾರದ ಐದನೇ ಗ್ಯಾರಂಟಿಯಾದ ಯುವನಿಧಿಯನ್ನು ಜಾರಿಗೊಳಿಸಲಾಗುತ್ತಿದೆ. ಪದವಿ ಪಡೆದ ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ ಹಾಗೂ ಡಿಪೆÇ್ಲೀಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂಪಾಯಿ ಭತ್ಯೆಯನ್ನು 2 ವರ್ಷಗಳ ಕಾಲ ನೀಡುವ ಯೋಜನೆಯಾಗಿದೆ. ಈ ಅವಧಿಯಲ್ಲಿ ಭತ್ಯೆಯ ಜೊತೆಗೆ ಉದ್ಯೋಗ ಲಭಿಸಲು ಬೇಕಾದಂತಹ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಕೌಶಲ್ಯ ತರಬೇತಿಯನ್ನು ನೀಡಲಾಗುವುದು.

ಎರಡು ವರ್ಷದೊಳಗೆ ಸರಕಾರಿ, ಖಾಸಗಿ ಅಥವಾ ಸ್ವಯಂ ಉದ್ಯೋಗ ದೊರೆತಲ್ಲಿ ಯುವನಿಧಿ ಭತ್ಯೆಯನ್ನು ನೀಡಲಾಗುವುದಿಲ್ಲ. ಕೈಗಾರಿಕೆಗಳಲ್ಲಿ ಬೇಡಿಕೆಯಿರುವ ಕೌಶಲ್ಯದ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿಯ ಅವಧಿಯನ್ನು ಸಂಬಂಧಪಟ್ಟ ಇಲಾಖೆ ನಿರ್ಧರಿಸಲಿದೆ ಎಂದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಇಂಧನ ಸಚಿವ ಕೆ ಜೆ ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಜಾರಿಗೆ ತರಬೇಕು, ಕಾಂಗ್ರೆಸ್ ಸರಕಾರ ಅದನ್ನು ಮಾಡುತ್ತಿದೆ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top