ಶಾಸಕರು, ಕೋರ್ ಕಮಿಟಿ ತೀರ್ಮಾನ ಕಡೆಗಣಿಸಿ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ : ಜಿಲ್ಲಾಧ್ಯಕ್ಷರ ವಿರುದ್ದ ಬಂಟ್ವಾಳ ಬಿಜೆಪಿಗರ ಆಕ್ರೋಶ ಸ್ಫೋಟ - Karavali Times ಶಾಸಕರು, ಕೋರ್ ಕಮಿಟಿ ತೀರ್ಮಾನ ಕಡೆಗಣಿಸಿ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ : ಜಿಲ್ಲಾಧ್ಯಕ್ಷರ ವಿರುದ್ದ ಬಂಟ್ವಾಳ ಬಿಜೆಪಿಗರ ಆಕ್ರೋಶ ಸ್ಫೋಟ - Karavali Times

728x90

4 February 2024

ಶಾಸಕರು, ಕೋರ್ ಕಮಿಟಿ ತೀರ್ಮಾನ ಕಡೆಗಣಿಸಿ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ : ಜಿಲ್ಲಾಧ್ಯಕ್ಷರ ವಿರುದ್ದ ಬಂಟ್ವಾಳ ಬಿಜೆಪಿಗರ ಆಕ್ರೋಶ ಸ್ಫೋಟ

ಬಂಟ್ವಾಳ, ಫೆಬ್ರವರಿ 04, 2024 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಮಂಡಲ ಅಧ್ಯಕ್ಷರು-ಪದಾಧಿಕಾರಿಗಳ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಂಡ ಮಂಡಲ ಅಧ್ಯಕ್ಷರ ಹೆಸರುಗಳನ್ನು ಸಂಪೂರ್ಣವಾಗಿ ಕಡೆಸಿ ಬೇರೆಯೇ ವ್ಯಕ್ತಿಗೆ ಅಧ್ಯಕ್ಷ ಪಟ್ಟದ ಕಟ್ಟಿದ ಜಿಲ್ಲಾ ಬಿಜೆಪಿ ಅಧ್ಯಕ್ಷರ ನಡೆಗೆ ಇದೀಗ ಬಂಟ್ವಾಳ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಗರಂ ಆಗಿದ್ದಾರೆ. 

ಬಂಟ್ವಾಳ ಬಿಜೆಪಿ ಕೋರ್ ಕಮಿಟಿ ಹಾಗೂ ಮಂಡಲ ಪದಾಧಿಕಾರಿಗಳ ಒಕ್ಕೊರಳ ತೀರ್ಮಾನದಂತೆ ಮಂಡಲ ಅಧ್ಯಕ್ಷ ಸ್ಥಾನಕ್ಕೆ ರಾಮದಾಸ ಬಂಟ್ವಾಳ, ಸುದರ್ಶನ ಹಾಗೂ ಸಂದೇಶ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ಕಳಿಸಲಾಗಿತ್ತು ಎನ್ನಲಾಗಿದೆ. ಕೋರ್ ಕಮಿಟಿಯ ಈ ಶಿಫಾರಸ್ಸಿಗೆ ಕ್ಷೇತ್ರದ ಶಾಸಕ ಯು ರಾಜೇಶ್ ನಾಯಕ್ ಹಾಗೂ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಕೂಡಾ ಪೂರ್ಣ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಮಂಡಲ ಅಧ್ಯಕ್ಷರ ನೇಮಕ ಆಗುವ ವೇಳೆ ಪಕ್ಷ ಚಟುವಟಿಕೆಯಿಂದ ದೂರವಾಗಿ ಕಾಯಕರ್ತರ ಮಧ್ಯೆ ಅಂತರ ಕಾಯ್ದುಕೊಂಡು ಬಂದ ವ್ಯಕ್ತಿಯ ಹೆಸರನ್ನು ಘೋಷಿಸಿರುವುದು ಇದೀಗ ಬಂಟ್ವಾಳ ಬಿಜೆಪಿಗರ ಕಣ್ಣು ಕೆಂಪಾಗಿಸಿದೆ. 

ಕೋರ್ ಕಮಿಟಿ ಸಭೆಯಲ್ಲಿ ಅಳೆದು ತೂಗಿ ಕೇವಲ ಮೂರು ಮಂದಿ ಪ್ರಮುಖರ ಹೆಸರನ್ನು ಮಾತ್ರ ಪರಿಗಣಿಸಿ ಅದನ್ನೇ ಜಿಲ್ಲಾ ಸಮಿತಿಗೆ ಕಳಿಸಿಕೊಡಲಾಗಿತ್ತು. ಸದ್ಯ ಮಂಡಲ ಅಧ್ಯಕ್ಷರಾಗಿ ನೇಮಕಗೊಂಡಿರುವ ವ್ಯಕ್ತಿ ಈ ಹಿಂದೆ ಅಧ್ಯಕ್ಷರಾಗಿದ್ದ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿ ಸೋಲನುಭವಿಸಿತ್ತಲ್ಲದೆ ಅವರೇ ಸ್ವತಃ ಎಪಿಎಂಸಿ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಪಕ್ಷ ಸಂಘಟನೆಯ ಈ ಎಲ್ಲಾ ವೈಫಲ್ಯಕ್ಕಾಗಿ ಈ ಬಾರಿ ಕೋರ್ ಕಮಿಟಿ ಅವರನ್ನು ದೂರ ಇರಿಸಿ ಹೊಸಬರ ಹೆಸರನ್ನು ಅಂತಿಮಗೊಳಿಸಿ ಕಳಿಸಿತ್ತು. ಆದರೆ ಬಿಜೆಪಿ ಜಿಲ್ಲಾಧ್ಯಕ್ಷರು ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೋರಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರನ್ನು ಕಡೆಗಣಿಸಿ ಸ್ವಾರ್ಥ ಸಾಧನೆಯ ಹಿನ್ನಲೆಯಲ್ಲಿ ನಾಯಕರ ಹಾಗೂ ಕಾರ್ಯಕರ್ತರ ಹಿತ ಕಡೆಗಣಿಸಿ ಬೇರೆ ವ್ಯಕ್ತಿಗೆ ಮಣೆ ಹಾಕಿ ಅಧ್ಯಕ್ಷ ಪಟ್ಟ ಕಟ್ಟಿದ್ದು ಸ್ವತಃ ಶಾಸಕರ ಸಹಿತ ಬಂಟ್ವಾಳದಲ್ಲಿ ಸಕ್ರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಕೆರಳಿಸಿದೆ. 

ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಬಂಟ್ವಾಳದ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ, ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ ಮೊದಲಾದವರ ನೇತೃತ್ವದಲ್ಲಿ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಅವರನ್ನು ಭೇಟಿ ಮಾಡಿ ತಕ್ಷಣ ಮಂಡಲ ಅಧ್ಯಕ್ಷರ ನೇಮಕ ತಡೆ ಹಿಡಿದು ಕೋರ್ ಕಮಿಟಿ ಸೂಚಿಸಿದ ವ್ಯಕ್ತಿಗಳ ಪೈಕಿ ಓರ್ವರನ್ನೇ ಆಯ್ಕೆ ಮಾಡಬೇಕು. ತಪ್ಪಿದಲ್ಲಿ ಪಕ್ಷ ಚಟುವಟಿಕೆಯಿಂದ ಸಂಪೂರ್ಣವಾಗಿ ದೂರವಿರುವುದಾಗಿ ಎಚ್ಚರಿಸಿದ್ದಾರೆ. ಬಂಟ್ವಾಳದಲ್ಲಿ ಭುಗಿಲೆದ್ದಿರುವ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಯಾವ ಹಂತ ತಲುಪುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಶಾಸಕರು, ಕೋರ್ ಕಮಿಟಿ ತೀರ್ಮಾನ ಕಡೆಗಣಿಸಿ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ : ಜಿಲ್ಲಾಧ್ಯಕ್ಷರ ವಿರುದ್ದ ಬಂಟ್ವಾಳ ಬಿಜೆಪಿಗರ ಆಕ್ರೋಶ ಸ್ಫೋಟ Rating: 5 Reviewed By: karavali Times
Scroll to Top