ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ : ಎಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು 2 ಹಂತದಲ್ಲಿ ಮತದಾನ, ಜೂನ್ 4 ರಂದು ಕೌಂಟಿಂಗ್ - Karavali Times ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ : ಎಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು 2 ಹಂತದಲ್ಲಿ ಮತದಾನ, ಜೂನ್ 4 ರಂದು ಕೌಂಟಿಂಗ್ - Karavali Times

728x90

16 March 2024

ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ : ಎಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು 2 ಹಂತದಲ್ಲಿ ಮತದಾನ, ಜೂನ್ 4 ರಂದು ಕೌಂಟಿಂಗ್

ನವದೆಹಲಿ, ಮಾರ್ಚ್ 16, 2024 (ಕರಾವಳಿ ಟೈಮ್ಸ್) : 2024ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಘೋಷಣೆ ಮಾಡಿದೆ. ಎಪ್ರಿಲ್ 19 ರಿಂದ ಚುನಾವಣೆ ಆರಂಭವಾಗಲಿದ್ದು, ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 

ಶನಿವಾರ ಅಪರಾಹ್ನ ದೆಹಲಿಯ ವಿಜ್ಞಾನ ಭವನದಲ್ಲಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾವು ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಘೋಷಿಸಿದರು. 

ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಎಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

ಹಂತಗಳು ದಿನಾಂಕ ಲೋಕಸಭಾ ಕ್ಷೇತ್ರ

ಎಪ್ರಿಲ್ 19 ರಂದು 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಎಪ್ರಿಲ್ 26 ರಂದು 89 ಕ್ಷೇತ್ರಗಳಿಗೆ 2ನೇ ಹಂತದ ಮತದಾನ, ಮೇ 7 ರಂದು 3ನೇ ಹಂತದಲ್ಲಿ 94 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು 96 ಕ್ಷೇತ್ರಗಳಿಗೆ 4ನೇ ಹಂತದ ಮತದಾನ ನಡೆಯಲಿದೆ. 5ನೇ ಹಂತದಲ್ಲಿ ಮೇ 20 ರಂದು 49 ಕ್ಷೇತ್ರಗಳಿಗೆ, ಮೇ 25 ರಂದು 6ನೇ ಹಂತದಲ್ಲಿ 57 ಕ್ಷೇತ್ರಗಳಿಗೆ ಹಾಗೂ 7ನೇ ಹಾಗೂ ಕೊನೆಯ ಹಂತದಲ್ಲಿ ಜೂನ್ 1 ರಂದು 8 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ ರಾಜೀವ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 2 ಹಂತಗಳಲ್ಲಿ ಚುನಾವಣೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಎಪ್ರಿಲ್ 26 ರಂದು ರಾಜ್ಯದ ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರದಲ್ಲಿ ಮತದಾನ ನಡೆಯಲಿದೆ.

ಮೇ 7 ರಂದು ಎರಡನೇ ಹಂತದಲ್ಲಿ ಒಟ್ಟು 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ್, ಹುಬ್ಬಳಿ ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರದಲ್ಲಿ ಮೇ 7 ರಂದು ಚುನಾವಣೆ ನಡೆಯಲಿದೆ.

ಮೊದಲ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾರ್ಚ್ 28ಕ್ಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಎಪ್ರಿಲ್ 4 ಕೊನೇ ದಿನವಾಗಿದೆ. ಎಪ್ರಿಲ್ 5 ರಂದು ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಎಪ್ರಿಲ್ 8 ಕೊನೆ ದಿನವಾಗಿದೆ.

2ನೇ ಹಂತದ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಎಪ್ರಿಲ್ 12 ರಂದು ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಎಪ್ರಿಲ್ 19 ಕೊನೇ ದಿನವಾಗಿದೆ. ಎಪ್ರಿಲ್ 20 ನಾಮಪತ್ರ ಪರಿಶೀಲನೆ ನಡೆಯಲಿದ್ದರೆ, ನಾಮಪತ್ರ ಹಿಂಪಡೆಯಲು ಎಪ್ರಿಲ್ 22 ಕೊನೇ ದಿನವಾಗಿದೆ.

2024 ರ ಲೋಕಸಭೆ ಚುನಾವಣೆ ಜೊತೆಗೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೊ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ರಾಜ್ಯದ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಿಸಲಾಗಿದೆ.

ಮೇ 13 ರಂದು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎಪ್ರಿಲ್ 19 ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು 1.5 ಕೋಟಿ ಸಿಬ್ಬಂದಿ, 55 ಲಕ್ಷ ಇವಿಎಂಗಳಿಂದ ಚುನಾವಣೆ ನಿರ್ವಹಿಸಲ್ಪಡುತ್ತದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ. ದೇಶದಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಮತದಾನಕ್ಕೆ ಒಟ್ಟು 55 ಲಕ್ಷ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗಲಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಂದೂವರೆ ಕೋಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.

ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಕೂಡಾ ಜಾರಿಯಾಗಿದೆ. ನೀತಿ ಸಂಹಿತೆಯಂತೆ ಸರಕಾರ ಅಥವಾ ಅನುದಾನ ಅಥವಾ ಭರವಸೆಗಳನ್ನು ಪ್ರಕಟಿಸುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ಕಾರ್ಯಕ್ರಮ ನೆರವೇರಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಹ ನೇಮಕಾತಿ ಮಾಡುವಂತಿಲ್ಲ ಹಾಗೂ ಚುನಾವಣೆ ಕೆಲಸಕ್ಕೆ ರಾಜಕಾರಣಿಗಳು ಸರಕಾರಿ ವಾಹನ ಬಳಸುವಂತಿಲ್ಲ.

ಜೂನ್ 16ಕ್ಕೆ ಈಗಿನ ಲೋಕಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ ಪಕ್ಷ 52 ಸೀಟುಗಳನ್ನು ಗೆದ್ದು, ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಗಳಿಸುವುದಕ್ಕೂ ವಿಫಲವಾಗಿತ್ತು. ಈ ಬಾರಿ ವಿಪಕ್ಷಗಳು ಒಟ್ಟು ಸೇರಿ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದು, ಮೋದಿ ಸರಕಾರವನ್ನು ಕೆಳಗಿಸಲು ಶತಾಯಗತಾಯ ಪ್ರಯತ್ನ ನಡೆಸಲಿದೆ. ಎಲ್ಲದಕ್ಕೂ ಜೂನ್ 4 ರಂದು ಸ್ಪಷ್ಟ ಉತ್ತರ ದೊರೆಯಲಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ : ಎಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು 2 ಹಂತದಲ್ಲಿ ಮತದಾನ, ಜೂನ್ 4 ರಂದು ಕೌಂಟಿಂಗ್ Rating: 5 Reviewed By: karavali Times
Scroll to Top