ಕ್ಯಾಲಿಕಟ್, ಎಪ್ರಿಲ್ 13, 2024 (ಕರಾವಳಿ ಟೈಮ್ಸ್) : ಸೌದಿ ಕುಟುಂಬದ ಕ್ಷಮಾಪಣೆ ಬೇಡಿಕೆಗೆ ಬೇಕಾಗಿದ್ದ ಬರೋಬ್ಬರಿ 34 ಕೋಟಿ ರೂಪಾಯಿ ಭಾರತೀಯ ಹಣಕ್ಕಾಗಿ ಕೇರಳದ ಜನತೆಗೆ ಕೇವಲ ವಾರದೊಳಗೆ ಸ್ಪಂದಿಸುವ ಮೂಲಕ ಬೃಹತ್ ದೇಣಿಗೆ ಸಂಗ್ರಹವಾಗಿದೆ. ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿ ಕಳೆದ 18 ವರ್ಷಗಳಿಂದ ರಿಯಾದ್ ಜೈಲಿನಲ್ಲಿ ಬಂಧಿಯಾಗಿರುವ ಕೋಝಿಕ್ಕೋಡ್ ಸಮೀಪದ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಎಂಬಾತನ ಬಿಡುಗಡೆಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ ಈ ದೇಣಿಗೆ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ.
ರಿಯಾದ್ ಜೈಲಿನಲ್ಲಿ ಬಂಧನದಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ಸಹಿತ ಹಲವು ರಾಜ್ಯಗಳಲ್ಲಿ ಈ ನಿಧಿ ಸಂಗ್ರಹಕ್ಕೆ ಕೋರಿಕೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಮುಖರು ಸಲ್ಲಿಸಿದ್ದರು. ಕೋರಿಕೆಗೆ ಮನ್ನಣೆ ನೀಡಿದ ವಿವಿಧ ರಾಜ್ಯಗಳ ಜನರು ತಮ್ಮ ಕೈಲಾದ ಸಹಾಯ ಹಸ್ತ ನೀಡುವ ಮೂಲಕ ಈ ಬೃಹತ್ ನಿಧಿ ಸಂಗ್ರಹವಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಬಂಧನದಲ್ಲಿರುವ ಅಬ್ದುಲ್ ರಹೀಂ ಶೀಘ್ರ ಬಿಡುಗಡೆಗೊಂಡು ತವರು ಸೇರುವ ನಿರೀಕ್ಷೆ ಇದೆ. ಇದೀಗ ಸಂಗ್ರಹವಾಗಿರುವ ಬೃಹತ್ ಕೋಟಿ ಹಣವನ್ನು 18 ವರ್ಷಗಳಿಂದ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಭಾರತೀಯ ರಾಯಭಾರಿ ಕಚೇರಿ ಮೂಲಕ ಸೌದಿ ಕುಟುಂಬಕ್ಕೆ ನೀಡುವ ಪ್ರಕ್ರಿಯೆ ನಡೆಯಲಿದೆ.
ಅಬ್ದುಲ್ ರಹೀಮ್ ಬಿಡುಗಡೆಗಾಗಿ ಆರಂಭಿಸಲಾದ ಟ್ರಸ್ಟ್ ಮೂಲಕ ಪ್ರಮುಖ ನಿಧಿ ಸಂಗ್ರಹ ಆರಂಭವಾಗಿ ಇದೀಗ 31,93,46,568 ರೂಪಾಯಿ ಹಣ ಬ್ಯಾಂಕ್ ತಲುಪಿದೆ. ಮನೆಗೆ ನೇರವಾಗಿ 2.52 ಕೋಟಿ ರೂಪಾಯಿ ಬಂದಿದ್ದು, ಬಾಬಿ ಚೆಮ್ಮನ್ನೂರ್ ನೀಡಿದ ಒಂದು ಕೋಟಿ ರೂಪಾಯಿ ಸೇರಿ ಒಟ್ಟು 34,45,46,568 ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಮಾಹಿತಿ ತಿಳಿಸಿದೆ.
2006 ರಲ್ಲಿ ಅಂದು 26 ವರ್ಷ ಪ್ರಾಯದ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿದ್ದರು. ಚಾಲಕ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ತೆರಳಿದ್ದ ರಹೀಮ್ ತನ್ನ ಪ್ರಾಯೋಜಕನ ಭಿನ್ನಚೇತನ ಪುತ್ರ ಫೈಝ್ ಎಂಬಾತನ ಕುತ್ತಿಗೆಗೆ ಜೋಡಿಸಲಾದ ವಿಶೇಷ ಸಾಧನದ ಮೂಲಕ ಆಹಾರ ಮತ್ತು ನೀರನ್ನು ನೀಡಲಾಗುತ್ತಿತ್ತು. ಮಗುವನ್ನು ಹೊರಗೆ ಕರೆದುಕೊಂಡು ಹೋಗುವ ಜವಾಬ್ದಾರಿಯೂ ರಹೀಮ್ ಅವರ ಮೇಲಿತ್ತು. 2006ರ ಡಿಸೆಂಬರ್ 24 ರಂದು ಕಾರಿನಲ್ಲಿ ಫೈಝ್ ನ್ನು ಕರೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮಗುವಿನ ಕುತ್ತಿಗೆಗೆ ಅಳವಡಿಸಿದ್ದ ಸಾಧನಕ್ಕೆ ಅಬ್ದುಲ್ ರಹೀಮ್ ಅವರ ಕೈ ಸಿಕ್ಕಿಹಾಕಿಕೊಂಡ ಪರಿಣಾಮ ಫೈಜ್ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದನು.
ಘಟನೆ ಆಕಸ್ಮಿಕವಾಗಿ ನಡೆದಿದ್ದರೂ ಸೌದಿ ಕಾನೂನು ಪ್ರಕಾರ ಅದು ಶಿಕ್ಷಾರ್ಹ ಅಪರಾಧವಾಗಿ ಗುರುತಿಸಿಕೊಂಡು ಘಟನೆಯ ಸಂಬಂಧ ಪೆÇಲೀಸರು ರಹೀಮ್ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾದ್ ನ್ಯಾಯಾಲಯ ಅಬ್ದುಲ್ ರಹೀಂ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು, ಮೇಲ್ಮನವಿ ನ್ಯಾಯಾಲಯಗಳೂ ಮರಣ ದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈ ಮಧ್ಯೆ ವೇಳೆ ಫೈಝ್ ಅವರ ಕುಟುಂಬವನ್ನು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು, ಆದರೆ ಅವರು ಕ್ಷಮೆ ನೀಡಲು ಸಿದ್ಧರಿರಲಿಲ್ಲ. ಇದೀಗ ಸಾಕಷ್ಟು ಪ್ರಯತ್ನಗಳ ಬಳಿಕ ಕೊನೆಗೂ ಫೈಝ್ ಕುಟುಂಬ ಕ್ಷಮೆ ನೀಡಲು ಮುಂದಾಗಿದ್ದು, ಇದಕ್ಕಾಗಿ 34 ಕೋಟಿ ರೂಪಾಯಿಗಳ ಭಾರತೀಯ ಮೊತ್ತ ಪರಿಹಾರವಾಗಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ ಹಿನ್ನಲೆಯಲ್ಲಿ ಅದನ್ನು ಒಪ್ಪಿಕೊಂಡು ಈ ಬೃಹತ್ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಗುರಿ ತಲುಪಿದ್ದು, ಇನ್ನೇನು ಅಬ್ದುಲ್ ರಹೀಂ ಅವರ ಬಿಡುಗಡೆಗೆ ರಹೀಂ ಕುಟುಂಬ ಸಹಿತ ವಿವಿಧ ರಾಜ್ಯಗಳಲ್ಲಿ ದೇಣಿಗೆ ನೀಡಿ ಮಾನವೀಯತೆ ಮೆರೆದ ಮಾನವೀಯ ಹೃದಯಗಳು ಕಾತರದಿಂದ ಕಾಯುತ್ತಿದೆ.
0 comments:
Post a Comment