ಬಂಟ್ವಾಳ, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿನಬಳಿ-ಕೋಟಿಹಿತ್ತಿಲು ನಿವಾಸಿ ಜಿ ಕೆ ಹಮೀದ್ ಹಾಜಿ ಅವರ ಪುತ್ರ ಜಿ ಕೆ ಹಿದಾಯತುಲ್ಲಾ (50) ಅವರು ಮಂಗಳವಾರ ರಾತ್ರಿ ಹಠಾತ್ ಕಾಣಿಸಿಕೊಂಡ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈದುಲ್-ಫಿತ್ರ್ ಹಬ್ಬದ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ತಮ್ಮ ಕುಟುಂಬಿಕರ ಫಿತ್ರ್ ಝಕಾತ್ ಅಕ್ಕಿಯನ್ನು ಸ್ವತಃ ತಾನೇ ಸ್ಥಳೀಯ ಬಡವರಿಗೆ ವಿತರಿಸಿ ಬಂದು ಮನೆಯಲ್ಲೇ ಇದ್ದ ಹಿದಾಯತುಲ್ಲಾ ಅವರಿಗೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೃದಯಾಘಾತದಿಂದ ಮರಣ ಸಂಭವಿಸಿರುವ ಬಗ್ಗೆ ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೆ ಗೂಡಿನಬಳಿ-ಕೋಟಿಹಿತ್ತಿಲಿನ ತಮ್ಮ ಜಮೀನಿನಲ್ಲಿ ಹೊಸ ಮನೆ ನಿರ್ಮಿಸಿ ಗೃಹಪ್ರವೇಶ ನಡೆಸಿದ್ದ ಹಿದಾಯತುಲ್ಲಾ ಅವರ ಅಕಾಲಿಕ ಮರಣದಿಂದ ಕುಟುಂಬ ದಿಗ್ಭ್ರಾಂತಗೊಂಡಿದೆ. ಈದುಲ್ ಫಿತ್ರ್ ಹಬ್ಬದ ಸಿದ್ದತೆಯಲ್ಲಿರುವಾಗಲೇ ಸಂಭವಿಸಿದ ಹಠಾತ್ ಮರಣ ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ-ಸಹೋದರಿಯ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತ ಹಿದಾಯತುಲ್ಲಾ ಅವರ ಓರ್ವ ಪುತ್ರ ಕತಾರ್ ದೇಶದಲ್ಲಿ ಉದ್ಯೋಗದಲ್ಲಿದ್ದರೆ, ಇನ್ನೋರ್ವ ಪುತ್ರ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಇನ್ನೋರ್ವ ಪುತ್ರಿ ಅಪ್ರಾಪ್ತ ವಯಸ್ಕಳಾಗಿದ್ದಾಳೆ. ಮೃತರ ದಫನ ಕಾರ್ಯವು ಬುಧವಾರ ಮಧ್ಯಾಹ್ನದ ವೇಳೆಗೆ ಗೂಡಿನಬಳಿ ಮಸೀದಿ ದಫನ ಭೂಮಿಯಲ್ಲಿ ನೆರವೇರಿಸಲಾಗಿದೆ.
0 comments:
Post a Comment