ಮಡಿಕೇರಿ:, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟಿಗೆ ಪರೀಕ್ಷೆ ಬರೆದಿದ್ದ ತಾಯಿ-ಮಗಳು ಇಬ್ಬರೂ ಪಾಸ್ ಆಗುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.
ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಬೇಬಿರಾಣಿ ಮತ್ತು ಅವರ ಪುತ್ರಿ ರಿನಿಶಾ ಅವರು ಪ್ರಸ್ತುತ ವರ್ಷದಲ್ಲಿ ಪರೀಕ್ಷೆ ಬರೆದು ಒಟ್ಟಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿ ಗಮನ ಸೆಳೆದಿದ್ದಾರೆ. ಕುಶಾಲನಗರದ ಬೇಬಿರಾಣಿ ಮತ್ತು ಸುರೇಂದ್ರ ದಂಪತಿಯ ಪುತ್ರಿ ರಿನಿಶಾ ಅವರು ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ವಿಜ್ಞಾನ ವಿಭಾಗದಲ್ಲಿ 570 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ಈಕೆಯ ತಾಯಿ ಬೇಬಿರಾಣಿ ಅವರು ಕಲಾ ವಿಭಾಗದಲ್ಲಿ 388 ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ತಾಯಿ-ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು. ಬೇಬಿರಾಣಿ ಅವರು ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.
ತಾಯಿ ಮತ್ತು ಮಗಳು ಇಬ್ಬರೂ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ್ದು, ಮಗಳು ಕನ್ನಡದಲ್ಲಿ 96 ಅಂಕಗಳನ್ನು ಪಡೆದುಕೊಂಡರೆ, ತಾಯಿ 93 ಅಂಕ ಗಳಿಸಿದ್ದಾರೆ.
“25 ವರ್ಷಗಳ ಹಿಂದೆ ನಾನು 10ನೇ ತರಗತಿ ಪೂರ್ಣಗೊಳಿಸಿದ ನಂತರ, ಕಳೆದ ವರ್ಷ ನನ್ನ ಮಗಳ ಒತ್ತಾಯದ ಮೇರೆಗೆ ಪಿಯುಸಿ ಪರೀಕ್ಷೆ ಬರೆದಿದ್ದೆ. ಈಗ ಪಾಸ್ ಆಗಿದ್ದು ಖುಷಿಯಾಗುತ್ತಿಗೆ” ಎಂದು ಬೇಬಿರಾಣಿ ಹೇಳಿಕೊಂಡಿದ್ದಾರೆ.
0 comments:
Post a Comment