ಹಳೆ ವೀಡಿಯೋ ವೈರಲ್ ಮಾಡಿ ಬಿಲ್ಲವರ ಮಧ್ಯೆ ಗೊಂದಲ ಸೃಷ್ಟಿಗೆ ಬಿಜೆಪಿ ಯತ್ನ : ಸಜಿಪ ಸತೀಶ್ ಪೂಜಾರಿ ಕೆಂಡಾಮಂಡಲ - Karavali Times ಹಳೆ ವೀಡಿಯೋ ವೈರಲ್ ಮಾಡಿ ಬಿಲ್ಲವರ ಮಧ್ಯೆ ಗೊಂದಲ ಸೃಷ್ಟಿಗೆ ಬಿಜೆಪಿ ಯತ್ನ : ಸಜಿಪ ಸತೀಶ್ ಪೂಜಾರಿ ಕೆಂಡಾಮಂಡಲ - Karavali Times

728x90

25 April 2024

ಹಳೆ ವೀಡಿಯೋ ವೈರಲ್ ಮಾಡಿ ಬಿಲ್ಲವರ ಮಧ್ಯೆ ಗೊಂದಲ ಸೃಷ್ಟಿಗೆ ಬಿಜೆಪಿ ಯತ್ನ : ಸಜಿಪ ಸತೀಶ್ ಪೂಜಾರಿ ಕೆಂಡಾಮಂಡಲ

 ಬಂಟ್ವಾಳ, ಎಪ್ರಿಲ್ 26, 2024 (ಕರಾವಳಿ ಟೈಮ್ಸ್) : ತನ್ನ ಹಳೆ ವೀಡಿಯೋವೊಂದನ್ನು ತನ್ನ ಅನುಮತಿ ಇಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ ಬಿಜೆಪಿಗರು ಮತಗಳಿಕೆ ಪ್ರಯತ್ನ ಮಾಡಿದ್ದಾರೆ ಎಂದು ಸಜಿಪ ನಿವಾಸಿ ಸತೀಶ್ ಪೂಜಾರಿ ಎಂಬವರು ಸ್ಥಳೀಯ ಬಿಜೆಪಿಗರ ಜನ್ಮ ಜಾಲಾಡಿದ್ದಲ್ಲದೆ ಬಿಜೆಪಿಯಿಂದ ತನಗಾದ ಹಾಗೂ ಬಿಲ್ಲವ ಸಮುದಾಯಕ್ಕಾದ ಅನ್ಯಾಯದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾಲ ತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದು, ಇದೀಗ ಅದು ಭಾರೀ ಸಂಚಲನ ಮೂಡಿಸುತ್ತಿದೆ.


2018 ರಲ್ಲಿ ಸತೀಶ್ ಪೂಜಾರಿ ಅವರು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಅವಧಿಯಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರ ಪ್ರಚೋದನೆಗೆ ಒಳಗಾಗಿ, ಪಕ್ಷದ ಅಮಲು ತಲಗೇರಿಸಿಕೊಂಡು ಕಾಂಗ್ರೆಸ್ ವಿರುದ್ದ ವೀಡಿಯೋವೊಂದನ್ನು ಮಾಡಿದ್ದೆ ಎಂದು ಹರಿಕೃಷ್ಣ ವಿರುದ್ದ ನೇರ ಆರೋಪ ಮಾಡಿರುವ ಸತೀಶ್ ಪೂಜಾರಿ ಆ ಬಳಿಕ ಬಿಜೆಪಿಗರ ಘನಂದಾರಿ ಕೆಲಸದಿಂದ ಪೊಲೀಸ್ ಕೇಸು, ಕೋರ್ಟ್ ಕಚೇರಿ, ತನಿಖೆ, ರೌಡಿ ಶೀಟರ್ ಮೊದಲಾದ ಸಮಸ್ಯೆ ಎದುರಿಸಿ ಜೀವನ ಜಂಜಾಟ ಎದುರಿಸುವಂತಾಗಿದೆ. ಹಿಂದುತ್ವ, ಹಿಂದುಗಳ ರಕ್ಷಣೆಗೆ ಎಂಬ ಬಿಜೆಪಿ ಪಕ್ಷ ಹಾಗೂ ನಾಯಕರಿಂದಾಗಿಯೇ ನಾನು ಈ ಎಲ್ಲ ಸಮಸ್ಯೆ ಎದುರಿಸಿದ್ದು, ಕಾಂಗ್ರೆಸ್ ಅಥವಾ ಇತರ ಧರ್ಮದ ಜನರಿಂದ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಕಷ್ಟ ಕಾಲದಲ್ಲಿ ನನ್ನ ಜೊತೆ ಕೈಜೋಡಿಸಿದವರು ಸಮಾಜ ಬಾಂಧವರೇ ಹೊರತು ಯಾವುದೇ ಬಿಜೆಪಿ ನಾಯಕರಲ್ಲ ಎಂದು ತೀವ್ರ ಗರಂ ಆಗಿ ವೀಡಿಯೋ ಹರಿಬಿಟ್ಟಿದ್ದಾರೆ.


ಬಿಜೆಪಿ ನಾಯಕರ ಕೃತ್ಯಗಳಿಂದ ಬೇಸತ್ತು ರಾಜಕೀಯದ ಉಸಾಬರಿಯೇ ಬೇಡ ಎಂದು ನಾನು ನನ್ನಷ್ಟಕ್ಕೆ ಇರುವ ಈ ಸಂದರ್ಭದಲ್ಲಿ ಇದೀಗ ಚುನಾವಣಾ ಸಮಯದಲ್ಲಿ ಬಿಜೆಪಿಗರು ನನ್ನ ಹಳೆಯ ವೀಡಿಯೋ ವೈರಲ್ ಮಾಡಿ ಬಿಲ್ಲವ ಸಮಾಜದ ನಡುವೆ ಗೊಂದಲ ಸೃಷ್ಟಿಸಿ ಮತ ಗಳಿಕೆಗೆ ಪ್ರಯತ್ನಪಟ್ಟಿರುವುದು ಬಿಜೆಪಿಗರ ವಿನಾಶ ಕಾಲಕ್ಕೆ ಬಂದಿರುವ ಕುಬುದ್ದಿ ಎಂದಿರುವ ಸತೀಶ್ ಪೂಜಾರಿ ಬಿಜೆಪಿಗರು ತಾಕತ್ತಿದ್ದರೆ ತಾವು ಮಾಡಿದ ಕೆಲಸ ಮುಂದಿಟ್ಟು ಮತಯಾಚಿಸಲಿ. ಅದು ಬಿಟ್ಟು ಇಂತಹ ನೀಚ ಕೃತ್ಯ ಎಸಗಿದರೆ ಮುಂದಿನ ದಿನಗಳಲ್ಲೂ ಅದಕ್ಕೆ ಬೇಕಾದ ರೀತಿಯಲ್ಲಿ ಪ್ರತಿಕ್ರಯಿಸಲು ನಾನು ಬದ್ದನಿದ್ದೇನೆ ಎಂದು ವೀಡಿಯೋದಲ್ಲಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸತೀಶ್ ಪೂಜಾರಿ ಅವರ ವೀಡಿಯೋ ಇದೀಗ ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ಬಿಜೆಪಿ ನಡೆಗೆ ತೀವ್ರ ಆಕ್ರೋಶದ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಹಳೆ ವೀಡಿಯೋ ವೈರಲ್ ಮಾಡಿ ಬಿಲ್ಲವರ ಮಧ್ಯೆ ಗೊಂದಲ ಸೃಷ್ಟಿಗೆ ಬಿಜೆಪಿ ಯತ್ನ : ಸಜಿಪ ಸತೀಶ್ ಪೂಜಾರಿ ಕೆಂಡಾಮಂಡಲ Rating: 5 Reviewed By: lk
Scroll to Top