ಬೆಳ್ತಂಗಡಿ, ಮೇ 08, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ, ಹಿರಿಯ ರಾಜಕೀಯ ಮುತ್ಸದ್ದಿ, ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ. ವಸಂತ ಬಂಗೇರ (78) ಅವರು ಅನಾರೋಗ್ಯ ಉಲ್ಬಣಿಸಿ ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ತಮ್ಮ ಜೀವನದ ಕೊನೆ ದಿನಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತರಾಗಿ, ನಾಯಕರಾಗಿ ಸಕ್ರಿಯರಾಗಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸದೆ ರಕ್ಷಿತ್ ಶಿವರಾಂ ಅವರಿಗೆ ಅವಕಾಶ ನೀಡಿದ್ದರು.
ಕಳೆದ ಕೆಲವು ಸಮಯಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ವಸಂತ ಬಂಗೇರ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಸಂಜೆ 4 ಗಂಟೆ ವೇಳೆಗೆ ಅನಾರೋಗ್ಯ ಉಲ್ಬಣಿಸಿ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಿ ಬಂಗೇರಾ ದಾಖಲೆ ಬರೆದಿದ್ದರು. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ ವಂಸತ ಬಂಗೇರ ಅವರನ್ನು ಸಹೋದರ ಪ್ರಭಾಕರ ಬಂಗೇರ ಅವರು ಸೋಲಿಸಿದ್ದರು. ಬಳಿಕ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿ ಗೆಲುವು ದಾಖಲಿಸಿದ್ದರು. 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಗುರುವಾರ ಮುಂಜಾನೆ ವಸಂತ ಬಂಗೇರ ಅವರ ಮೃತದೇಹ ಬೆಳ್ತಂಗಡಿಯ ಅವರು ಸ್ವಗೃಹಕ್ಕೆ ಬರಲಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು.
0 comments:
Post a Comment