ಬೆಳ್ತಂಗಡಿ, ಮೇ 27, 2024 (ಕರಾವಳಿ ಟೈಮ್ಸ್) : ನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಪತ್ತೆಯಾಗದೆ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ‘ಸಿ’ ಅಂತಿಮ ವರದಿ (ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು) ಸಲ್ಲಿಸಲಾಗಿದ್ದ ಪ್ರಕರಣವನ್ನು ಇದೀಗ ಬೇಧಿಸಿದ ಧರ್ಮಸ್ಥಳ ಪೊಲೀಸರು ಸೊತ್ತುಗಳ ಸಹಿತ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಅವರು, 2020 ರ ಜೂನ್ 26 ರಂದು ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿನ ನಿವಾಸಿ ಅಚ್ಯುತ್ ಭಟ್ (56) ಎಂಬವರ ಮನೆಯಲ್ಲಿ ಅಂದಾಜು 30 ರಿಂದ 35 ಪವನ್ ತೂಕದ ಚಿನ್ನದ ಒಡವೆಗಳು, ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳು ಹಾಗೂ 25 ಸಾವಿರ ರೂಪಾಯಿ ನಗದು ಹಣದ (ಒಟ್ಟು ಅಂದಾಜು ಮೌಲ್ಯ 12.40 ಲಕ್ಷ ರೂಪಾಯಿಗಳು) ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/2020 ಕಲಂ 448, 427, 506, 394 ಆರ್/ಡಬ್ಲ್ಯು 34 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆದರೆ ಸದ್ರಿ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆರೋಪಿಗಳು ಮತ್ತು ಕಳವಾದ ಸೊತ್ತುಗಳ ಸುಳಿವು ಪತ್ತೆಯಾಗದಿರುವುದರಿಂದ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ “ಸಿ“ ಅಂತಿಮ ವರದಿ (ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು) ವರದಿ ಸಲ್ಲಿಸಲಾಗಿತ್ತು.
ಮೇ 22 ರಂದು ಸದ್ರಿ ಪ್ರಕರಣದ ಆರೋಪಿಯ ಹಾಗೂ ಸೊತ್ತುಗಳ ಬಗ್ಗೆ ಸುಳಿವು ದೊರೆತ ಮೇರೆಗೆ, ತಕ್ಷಣ ಪ್ರವೃತ್ತರಾದ ಪೊಲೀಸ್ ತನಿಖಾ ತಂಡವು, ಆರೋಪಿಗಳ ಪೈಕಿ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆಯಲ್ಲಿ ಆರೋಪಿ ನೀಡಿದ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ನವಾಝ್ (38) ಹಾಗೂ ಬೆಂಗಳೂರು ನಿವಾಸಿ ಕೃಷ್ಣ (37) ಎಂಬವರನ್ನು ಬಂಧಿಸಲಾಗಿರುತ್ತದೆ. ಸದ್ರಿ ಮೂವರು ಆರೋಪಿಗಳೊಂದಿಗೆ ಇನ್ನೂ ಇಬ್ಬರು ಭಾಗಿಯಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ.
ಬಂಧಿತ ಆರೋಪಿಗಳಿಂದ ಅಂದಾಜು 7.87 ಲಕ್ಷ ರೂಪಾಯಿ ಮೌಲ್ಯದ ಒಟ್ಟು 104 ಗ್ರಾಂ ಬಂಗಾರದ ಆಭರಣಗಳು, 30,240/- ರೂಪಾಯಿ ಮೌಲ್ಯದ 288 ಗ್ರಾಂ ಬೆಳ್ಳಿ, ಸುಮಾರು 25 ಸಾವಿರ ಮೌಲ್ಯದ ಬೈಕ್ ಸಹಿತ ಒಟ್ಟು 8 ಲಕ್ಷದ 42 ಸಾವಿರದ 240/ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾದೀನಪಡಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪ್ರಕರಣದ ಪತ್ತೆಯಲ್ಲಿ ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್, ಎಡಿಶನಲ್ ಎಸ್ಪಿಗಳಾದ ಎಂ ಜಗದೀಶ್ ಮತ್ತು ರಾಜೇಂದ್ರ ಡಿ ಎಸ್, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಎಸ್ ಅವರುಗಳ ನಿರ್ದೆಶನದಲ್ಲಿ, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಆರ್ ಆಚಾರ್, ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಇ, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಸುಬ್ಬಾಪುರ ಮಠ್ ಅವರ ಮಾರ್ಗದರ್ಶದಲ್ಲಿ, ಧರ್ಮಸ್ಥಳ ಪೆÇೀಲಿಸ್ ಠಾಣಾ ಪಿಎಸ್ಸೈಗಳಾದ ಅನಿಲ್ ಕುಮಾರ ಡಿ, ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿಗಳಾದ ರಾಜೇಶ ಎನ್, ಪ್ರಶಾಂತ್ ಎಂ, ಸತೀಶ್ ನಾಯ್ಕ್, ಪ್ರಮೋದಿನಿ, ಶೇಖರ್ ಗೌಡ, ಕೃಷ್ಣಪ್ಪ, ಅನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ, ಗೋವಿಂದರಾಜ್, ಭಿಮೇಶ್, ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ಅವರುಗಳು ಪಾಲ್ಗೊಂಡಿದ್ದರು ಎಂದು ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಹೇಳಿದರು.
0 comments:
Post a Comment