ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡದ ಬಿಇಒ ಹಾಗೂ ಸಿಡಿಪಿಒ ವಿರುದ್ದ ತಹಶೀಲ್ದಾರ್ ಗರಂ - Karavali Times ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡದ ಬಿಇಒ ಹಾಗೂ ಸಿಡಿಪಿಒ ವಿರುದ್ದ ತಹಶೀಲ್ದಾರ್ ಗರಂ - Karavali Times

728x90

17 May 2024

ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡದ ಬಿಇಒ ಹಾಗೂ ಸಿಡಿಪಿಒ ವಿರುದ್ದ ತಹಶೀಲ್ದಾರ್ ಗರಂ

ಬಿ.ಸಿ.ರೋಡಿನಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಹೆದ್ದಾರಿ ಅಧಿಕಾರಿಗಳ ಸಭೆ 


ಬಂಟ್ವಾಳ, ಮೇ 17, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ಗುರುವಾರ ಬಿ ಸಿ ರೋಡಿನ ತಾಲೂಕು ಕಚೇರಿಯಲ್ಲಿ ನಡೆಯಿತು. 

ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಪ್ರಸ್ತಾಪ ನಡೆದು ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದರು. 

ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದರೂ ಇದುವರೆಗೂ ನೀಡದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಡಿಪಿಒ ಅವರ ಬಗ್ಗೆ ತಹಶೀಲ್ದಾರ್ ತೀವ್ರ ಗರಂ ಆದರು. ತಕ್ಷಣ ಈ ಬಗ್ಗೆ ವಿವರ ನೀಡುವಂತೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದರು. 

ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಚರಂಡಿ ದುರಸ್ತಿ ಹಾಗೂ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಂತೆ, ಅಪಾಯಕಾರಿಯಾಗಿ ಅಳವಡಿಸಿರುವ ಜಾಹೀರಾತು ಫಲಕ ಮಳೆಗೆ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಅವುಗಳನ್ನು ತೆರವುಗೊಳಿಸಲು ಬಂಟ್ವಾಳ ಪುರಸಭೆ ವಿಟ್ಲ ಪಟ್ಟಣ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಹೆದ್ದಾರಿಯಲ್ಲಿರುವ ಚರಂಡಿ ದುರಸ್ತಿ, ಮಳೆ ಸಮಯದಲ್ಲಿ ಪ್ರತಿ 3 ಕಿ ಮೀ ಅಂತರದಲ್ಲಿ ಕಾರ್ಮಿಕರನ್ನು ವಾಹನ ಹಾಗೂ ಸಲಕರಣೆ ಸಹಿತ ನಿಯುಕ್ತಿಗೊಳಿಸುವುದು, ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಡಿವೈಡರಿಗೆ ಬಿದ್ದಿರುವ ಮಣ್ಣು ತೆರವುಗೊಳಿಸುವುದು, ನಾದುರಸ್ತಿಯಲ್ಲಿರುವ ಸರ್ವಿಸ್ ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವುದು, ಟೋಲ್ ಗೇಟ್ ಬಳಿ ಟ್ರಾಫಿಕ್ ಜಾಂ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮುಚ್ಚಿ ಹೋಗಿರುವ ಚರಂಡಿ ಮತ್ತು ಮಣ್ಣು ಕಡ್ಡಿ ತುಂಬಿರುವ ಚರಂಡಿಗಳನ್ನು ಸ್ವಚ್ಛ ಗೊಳಿಸುವುದು, ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಎಚ್ಚರಿಕೆ ಫಲಕ ಇತ್ಯಾದಿಗಳನ್ನು ಅಳವಡಿಸಲು ಸೂಚಿಸಲಾಗಿದೆ. ಭಾರೀ ಮಳೆ ಬಂದಲ್ಲಿ ಫ್ಲೈಓವರ್ ಮೇಲೆ ಅಳವಡಿಸಿರುವ ಕಬ್ಬಿಣದ ಅಥವಾ ಭಾರವಾದ ವಸ್ತುಗಳು ಸಾರ್ವಜನಿಕರು ಅಥವಾ ವಾಹನಗಳ ಮೇಲೆ ಬೀಳುವ ಸಾಧ್ಯತೆ ಇದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ತಾಲೂಕು ವ್ಯಾಪ್ತಿಯ ಎಲ್ಲಾ ಕಿಂಡಿ ಅಣೆಕಟ್ಟುಗಳನ್ನು ಸುಸ್ಥಿತಿಯಲ್ಲಿಡಲು ಸಂಬಂಧಪಟ್ಟವರಿಗೆ ಸೂಚಿಸಲಾಯಿತು. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟಂತೆ ತಾಲೂಕು ಕಚೇರಿಯಲ್ಲಿ 24*7 ಕಂಟ್ರೋಲ್ ರೂಂ ಸ್ಥಾಪಿಸಿ ಅದಕ್ಕೆ ಸಿಬ್ಬಂದಿಗಳ ನೇಮಿಸಿ ಸಾರ್ವಜನಿಕರಿಗೆ ತುರ್ತು ಸ್ಪಂದನೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. 

ಬಳಿಕ ಮಂಗಳೂರು ಸಹಾಯಕ ಆಯುಕ್ತರು ಸಮಸ್ಯೆಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಎನ್ ಎಚ್ ಎ ಐ ಅಧಿಕಾರಿಗಳನ್ನು ಭೇಟಿಯಾಗಿ ಸಂಭವನೀಯ ನೀರು ಮತ್ತು ಮಣ್ಣು ಕುಸಿತದ ಕುರಿತು ಸೂಕ್ತ ಸಲಹೆಗಳನ್ನು ನೀಡಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದರು. 

ಈ ಸಂದರ್ಭ ತಾಲೂಕು ತಹಶೀಲ್ದಾರ್, ಸಹಾಯಕ ಚುನಾವಣಾಧಿಕಾರಿಗಳು, ಟ್ರಾಫಿಕ್ ಇನ್ಸ್‍ಪೆಕ್ಟರ್, ಹೆದ್ದಾರಿ ಇಲಾಖೆ, ಪ್ರಾಧಿಕಾರದ ಸೈಟ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡದ ಬಿಇಒ ಹಾಗೂ ಸಿಡಿಪಿಒ ವಿರುದ್ದ ತಹಶೀಲ್ದಾರ್ ಗರಂ Rating: 5 Reviewed By: karavali Times
Scroll to Top