ಉಡುಪಿ, ಮೇ 25, 2024 (ಕರಾವಳಿ ಟೈಮ್ಸ್) : ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಯುವಕರ ಎರಡು ಗುಂಪು ಮಾರಕಾಸ್ತ್ರ ಹಿಡಿದು ಸಿನಿಮೀಯ ಶೈಲಿಯಲ್ಲಿ ಹೊಡೆದಾಟ ನಡೆಸಿದ ಭಯಾನಕ ಹಾಗೂ ಕಾನೂನು ಸುವ್ಯಸ್ಥೆಗೆ ಸವಾಲಾಗುವ ರೀತಿಯ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಅಗಿದ್ದು, ಜನ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ಕಾರು ಹಾಗೂ ಎರಡು ಬೈಕುಗಳಲ್ಲಿ ಯುವಕ ತಂಡಗಳೆರಡು ಬಂದಿದೆ ಎನ್ನಲಾಗಿದ್ದು, ನಡು ಹೆದ್ದಾರಿಯಲ್ಲೇ ಎರ್ರಾಬಿರ್ರಿ ಕಾರು ಚಲಾಯಿಸಿ, ತಲ್ವಾರ್ ಬೀಸಿ, ಅಟ್ಟಾಡಿಸಿ ದಾಳಿ ನಡೆಸುವ ಹಾಗೂ ಯುವಕನ ಮೇಲೆ ಕಾರು ಹತ್ತಿಸಿದ ಭಯಾನಕ ಕೃತ್ಯಗಳು ವೀಡಿಯೋದಲ್ಲಿ ಕಂಡು ಬರುತ್ತಿದೆ. ಎಲ್ಲಿಯೋ ಸಿನಿಮಾ ಚಿತ್ರೀಕರಣ ಎಂದು ವೀಡಿಯೋ ನೋಡಿದ ಜನ ಅಂದುಕೊಳ್ಳುವಾಗಲೇ ಇದು ಯಾವುದೋ ಸಿನಿಮಾ ವೀಡಿಯೋ ಬುದ್ದಿವಂತರ ಜಿಲ್ಲೆಯಾಗಿರುವ ಉಡುಪಿ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದ ಕೃತ್ಯ ಎಂದು ಗೊತ್ತಾಗುತ್ತಲೇ ಜನ ದಂಗಾಗಿದ್ದಾರೆ, ಆತಂಕಕ್ಕೊಳಗಾಗಿದ್ದಾರೆ ಮಾತ್ರವಲ್ಲ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ ಓರ್ವ ವ್ಯಕ್ತಿಯಿಂದ ಹಾಡಹಗಲೇ ಒಂದೇ ಕುಟುಂಬದ ನಾಲ್ವರನ್ನು ಕಡಿದು ಕೊಂದು ಹಾಕಿದ ದುರಂತ ಘಟನೆಯಿಂದ ಒಂದಷ್ಟು ಚೇತರಿಸುತ್ತಿರುವ ಉಡುಪಿ ಜನತೆಗೆ ಈ ಹೆದ್ದಾರಿ ಕಾಳಗ ಮತ್ತಷು ಆತಂಕ-ಭಯ ತಂದೊಡ್ಡಿದೆ.
ಉಡುಪಿ ನಗರದ ಶಾರದಾ ಮಂಟಪ ಜಂಕ್ಷನ್ ಬಳಿ ಯುವಕರ ಗುಂಪಿನ ನಡುವೆ ಗ್ಯಾಂಗ್ ವಾರ್ ಕಾಳಗ ನಡೆದಿದೆ. ಕಾರು ವ್ಯವಹಾರಕ್ಕೆ ಸಂಬಂಧಿಸಿದ ಯುವಕರ ಮಧ್ಯೆ ತಲೆದೋರಿದ ವಿವಾದ ಬಳಿಕ ಬಿಡಗಾಯಿಸಿ ಈ ರೀತಿಯ ಬೀದಿ ತಳವಾರು ಕಾಳಗವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಘಟನೆಯನ್ನು ಪೂರ್ಣವಾಗಿ ವೀಡಿಯೋ ಚಿತ್ರೀಕರಣ ನಡೆಸಿರುವ ಮಂದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಬಳಿಕ ಘಟನೆಯ ಗಂಭೀರತೆ ಬಯಲಾಗಿದೆ.
ಕಾಪು ತಾಲೂಕು ಮೂಲದ ಗರುಡ ಗ್ಯಾಂಗ್‍ನ ಯುವಕರು ಕಾರು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿ ಕಾದಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಉಡುಪಿ ಜಿಲ್ಲ ಎಸ್ಪಿ ಡಾ ಅರುಣ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಾನೂನುಬಾಹಿರ ಕೃತ್ಯಗಳಿಗೆ ಕುಖ್ಯಾತಿ ಪಡೆದ ಗರುಡ ಗ್ಯಾಂಗ್ ಯುವಕರ ಮಧ್ಯೆ ಈ ಕಾಳಗ ನಡೆದಿದ್ದು, ಘಟನೆಯಲ್ಲಿ ಭಾಗಿಯಾದ ಕಾಪು ಮೂಲದ ಆಶಿಕ್ ಮತ್ತು ಗುಜ್ಜರಬೆಟ್ಟು ಮೂಲದ ರಾಕೀಬ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಏಳಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯ ಪ್ರಮುಖ ಆರೋಪಿ ಸಹಿತ ಎಲ್ಲರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಘಟನೆಗೆ ಬಳಸಲಾಗಿದ್ದ ಎರಡು ಕಾರು, ಬೈಕ್, ತಲವಾರು ಮತ್ತು ಡ್ರ್ಯಾಗರ್ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಹೆದ್ದಾರಿ ಮೂಲಕ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಂಡು ಹಾಗೂ ಸಭ್ಯರಾಗಿ ಅಗತ್ಯ ಕೆಲಸ-ಕಾರ್ಯಗಳಿಗಾಗಿ ವಾಹನಗಳಲ್ಲಿ ಸಂಚರಿಸುವ ಸಾರ್ವಜನಿಕರನ್ನು ಕಾನೂನಿನ ಹೆಸರಿನಲ್ಲಿ ಇನ್ನಿಲ್ಲದಂತೆ ಸತಾಯಿಸುವ ಪೊಲೀಸರು ಇಂತಹ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗುವ ಹಾಗೂ ಮಾರಕಾಸ್ತ್ರ ಇಟ್ಟುಕೊಂಡು ತಿರುಗಾಟ ನಡೆಸುವ ಅಬ್ಬೇಪಾರಿಗಳ ಬಗ್ಗೆ ಅದೇಕೆ ಮಟ್ಟಹಾಕುವುದಿಲ್ಲ ಎಂದು ಪ್ರಶ್ನಿಸಿರುವ ಸಾರ್ವಜನಿಕರು ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳ ಬಗ್ಗೆ ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಮದು ಧೋರಣೆ ತಾಳದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕುವಂತೆ ಆಗ್ರಹಿಸಿದ್ದಾರೆ.
0 comments:
Post a Comment