ಬಂಟ್ವಾಳ, ಮೇ 26, 2024 (ಕರಾವಳಿ ಟೈಮ್ಸ್) : ವಿದೇಶದಲ್ಲಿ ಉದ್ಯೋಗಕ್ಕೆ ತೆರಳಿದ ಕಾರಣ ವರ್ಷದಿಂದ ಬಾಗಿಲು ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು ರ್ಯಾಡೋ ವಾಚ್ ಹಾಗೂ ಸೀಸಿ ಕ್ಯಾಮೆರಾ ಡಿವಿಆರ್ ಕಳವುಗೈದ ಘಟನೆ ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಇಬ್ರಾಹಿಂ ಖಲೀಲ್ ಅವರು 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಮನೆಯನ್ನು ಭದ್ರಪಡಿಸಿ ಸಂಸಾರ ಸಮೇತ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದು, ನಂತರದ ದಿನಗಳಲ್ಲಿ ಖಲೀಲ್ ಅವರ ನೆರೆಮನೆ ವಾಸಿ ಹಾಗೂ ಸಂಬಂಧಿಯಾಗಿರುವ ಸೈಯದ್ ಅಲಿ ಎಂಬವರು ಖಲೀಲ್ ಅವರ ಮನೆಯ ಪರಿಸರವನ್ನು ನೋಡಿಕೊಂಡು ಬರುತ್ತಿದ್ದರು. ಈ ಮಧ್ಯೆ ಮೇ 25 ರ ಸಂಜೆಯಿಂದ 26ರ ಬೆಳಗ್ಗಿನ ಅವಧಿಯಲ್ಲಿ ಇಬ್ರಾಹಿಂ ಖಲೀಲ್ ಅವರ ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮೀಟಿ ಮುರಿದು ಒಳಪ್ರವೇಶಿಸಿ ಮನೆಯಲ್ಲಿದ್ದ ಕಪಾಟುಗಳನ್ನು ಮುರಿದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ ಅದರಲ್ಲಿದ್ದ ಸುಮಾರು 76 ಸಾವಿರ ರೂಪಾಯಿ ಮೌಲ್ಯದ ರ್ಯಾಡೋ ವಾಚ್ ಹಾಗೂ ಮನೆಯ ಹಾಲ್ ನಲ್ಲಿ ಅಳವಡಿಸಿದ್ದ ಸೀಸಿ ಕ್ಯಾಮೆರಾದ ಸುಮಾರು 8 ಸಾವಿರ ರೂಪಾಯಿ ಮೌಲ್ಯದ ಡಿವಿಆರ್ ಕಳವುಗೈದಿದ್ದಾರೆ. ಈ ಬಗ್ಗೆ ಸಂಬಂಧಿ ಹಾಗೂ ನೆರೆಮನೆ ವಾಸಿ ಸೈಯ್ಯದ್ ಅಲಿ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment