ಸೌತ್ ಆಫ್ರಿಕಾ ಕೂಡಾ ಅಜೇಯವಾಗಿ ಫೈನಲ್ ಪ್ರವೇಶಿಸಿದರೂ ರಣ ರೋಚಕ ಹೋರಾಟದಲ್ಲಿ 7 ರನ್ ಗಳ ಸೋಲುಣಿಸಿ ಮತ್ತೆ ಚೋಕರ್ಸ್ ಪಟ್ಟದಲ್ಲೇ ಕೂರಿಸಿದ ರೋಹಿತ್ ಪಡೆ... 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ಭಾರತ
ಬ್ರಿಡ್ಜ್‍ಟೌನ್ (ಬಾರ್ಬಡೋಸ್), ಜೂನ್ 30, 2024 (ಕರಾವಳಿ ಟೈಮ್ಸ್) : ಕ್ರಿಕೆಟ್ ಲೋಕದ ಚೋಕರ್ಸ್ ಎಂಬ ಕುಖ್ಯಾತಿ ಪಡೆದಿರುವ ದಕ್ಷಿಣ ಅಫ್ರಿಕಾ ತಂಡವನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕೆರಿಬಿಯನ್ ನಾಡಿನಲ್ಲಿ ಶನಿವಾರ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ರಣ ರೋಚಕ ಪಂದ್ಯದಲ್ಲಿ 7 ರನ್ ಗಳ ರೋಮಾಂಚಕ ಗೆಲುವು ದಾಖಲಿಸಿ 11 ವರ್ಷದ ಬಳಿಕ ಐಸಿಸಿ ಟ್ರೋಫಿ ಜಯಿಸಿದೆ. ಈ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ಚುಟುಕು ಕ್ರಿಕೆಟ್ ವಿಶ್ವಕಪ್ ನಲ್ಲಿ ಯಾವುದೇ ತಂಡಕ್ಕೂ ತಲೆ ಬಾಗದೆ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಎಂ ಎಸ್ ಧೋನಿ ಬಳಿಕ ಐಸಿಸಿ ಟ್ರೋಫಿ ಗೆದ್ದ ಮೊದಲ ನಾಯಕ ಎಂಬ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾದರು.
ಗೆಲ್ಲಲು 177 ರನ್‍ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ ಅಂತಿಮವಾಗಿ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಇನ್ನಿಂಗ್ಸ್ ಮುಕ್ತಾಯಗೊಳಿಸಿದ್ದು, ಟೀಂ ಇಂಡಿಯಾ 7 ರನ್ ಗಳ ರೋಮಾಂಚಕ ಜಯ ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಿತು.
ದಕ್ಷಿಣ ಆಫ್ರಿಕಾ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 16 ರನ್ ಅವಶ್ಯಕತೆ ಇದ್ದಾಗ ಡೆತ್ ಓವರ್ ಕೈಗೆತ್ತಿಕೊಂಡ ಹಾರ್ದಿಕ್ ಪಾಡ್ಯ ಮ್ಯಾಜಿಕ್ ಎಸೆತಗಾರಿಕೆ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು. ಪಾಂಡ್ಯ ಅವರ ಮೊದಲ ಎಸೆತವನ್ನು ಮಿಲ್ಲರ್ ಎತ್ತಿ ಭಾರಿಸಿದರಾದರೂ ಬೌಂಡರಿ ಲೈನ್ ಬಳಿ ಸೂರ್ಯಕುಮಾರ್ ಯಾದವ್ ಪಡೆದ ಟೆಕ್ನಿಕಲ್ ಕ್ಯಾಚಿಗೆ ಬಲಿಯಾಗುವ ಮೂಲಕ ಮಿಲ್ಲರ್ ಇನ್ನಿಂಗ್ಸ್ 21 ರನ್ ಗಳಿಗೆ ಮುಕ್ತಾಯಗೊಂಡಿತು. ಬಳಿಕ ಕ್ರೀಸಿಗೆ ಬಂದ ರಬಡಾ ಬಳಿಕದ ಎಸೆತವನ್ನು ಔಟ್ ಸೈಡ್ ಎಡ್ಜ್ ಮೂಲಕ ಬೌಂಡರಿಗಟ್ಟಿದರು. ನಂತರದ ಎಸೆತದಲ್ಲಿ ಲೆಗ್ ಬೈ ಮೂಲಕ 1 ರನ್ ಬಂತು. ಬಳಿಕದ ಎಸೆತ ವೈಡ್ ಆಗುವ ಮೂಲಕ 1 ಅತಿರಿಕ್ತ ಅಂಕ ಬಂತು. ಐದನೇ ಎಸೆತದಲ್ಲಿ ಫ್ರಂಟ್ ಫೂಟ್ ಆಟಕ್ಕೆ ಮಾರು ಹೋದ ರಬಡಾ ಕ್ಯಾಚ್ ಔಟಾದರು. ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಮಾತ್ರ ಬಂತು. ಈ ಮೂಲಕ 7 ರನ್ ಗಳ ರೋಚಕ ಜಯಭೇರಿ ಭಾರಿಸಿದ ಭಾರತ ಎರಡನೇ ಬಾರಿಗೆ ಚುಕುಟು ಕ್ರಿಕೆಟ್ ಲೋಕಾಧಿಪತ್ಯ ಅಲಂಕರಿಸಿತು.
ಭಾರತದಂತೆಯೇ ದಕ್ಷಿಣ ಆಫ್ರಿಕಾ ಕೂಡಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಪಂದ್ಯ ನೀರಸ ಅಂತ್ಯ ಕಾಣುವ ಸ್ಥಿತಿಯಲ್ಲಿತ್ತು. ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ 4 ರನ್, ನಾಯಕ ಆಡೆನ್ ಮಾರ್ಕ್ರಾಮ್ 4 ರನ್ ಗಳಿಸಿ ಔಟಾಗಿದ್ದರು. 12 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಆಫ್ರಿಕಾ ಸಂಕಷ್ಟದಲ್ಲಿದ್ದಾಗ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟಾನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ನಿಧಾನವಾಗಿ ರನ್ ಪೇರಿಸಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದರು. ಮೂರನೇ ವಿಕೆಟಿಗೆ ಕ್ವಿಂಟಾನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 38 ಎಸೆತಗಳಲ್ಲಿ 58 ರನ್ ಜೊತೆಯಾಟ ನಡೆಸಿದರು. ಸ್ಟಬ್ಸ್ 31 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ಕ್ವಿಂಟಾನ್ ಡಿ ಕಾಕ್ ಅವರು 39 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸರ್), ಕ್ಲಾಸೆನ್ ಸ್ಫೋಟಕ 52 ರನ್ (27 ಎಸೆತ, 2 ಬೌಂಡರಿ, 5 ಸಿಕ್ಸರ್), ಡೇವಿಡ್ ಮಿಲ್ಲರ್ 21 ರನ್ (17 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು.
ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಿತ್ತರೆ ಅರ್ಶ್‍ದೀಪ್ ಮತ್ತು ಬುಮ್ರಾ ತಲಾ 2 ವಿಕೆಟ್ ಪಡೆದರು, ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು. 59 ಎಸೆತಗಳಲ್ಲಿ 76 ರನ್ ಹೊಡೆದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‍ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಪ್ರಶಸ್ತಿ ಹಂತದಲ್ಲಿ ಎಡವಿತು. ಇತ್ತ ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಒಲಿದು ಬಂದಿದೆ.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪವರ್ ಪ್ಲೆ ಅವಧಿಯ ಆಟದಲ್ಲಿ 34 ರನ್ ಗಳಿಸುವಷ್ಟರಲ್ಲಿ ಅಗ್ರ ಮೂರು ಮಂದಿ ಬ್ಯಾಟರ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಲ್ಕನೇ ವಿಕೆಟ್‍ಗೆ ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ ಜೋಡಿ ಕೇವಲ 54 ಎಸೆತಗಳನ್ನು ಎದುರಿಸಿ ಅತ್ಯಮೂಲ್ಯ 72 ರನ್‍ಗಳ ಜತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 31 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‍ಗಳ ನೆರವಿನಿಂದ 47 ರನ್‍ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಈ ಆವೃತ್ತಿಯ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯುದ್ದಕ್ಕೂ ರನ್ ಬರ ಎದುರಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಸ್ಪೋಟಕ ಇನ್ನಿಂಗ್ಸ್ ಆಡಿದ ಕೊಹ್ಲಿ ಅಂತಿಮವಾಗಿ 59 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಸಿಡಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಕೊನೆಯಲ್ಲಿ ಶಿವಂ ದುಬೆ 27 ರನ್ ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟುವಂತೆ ಮಾಡಿದರು.
ಟೀ-ಇಂಡಿಯಾ ಈ ಬಾರಿ ಟಿ-20 ಚಾಂಪಿಯನ್ ಪಟ್ಟ ಅಲಂಕರಿಸುವುದರ ಜೊತೆಗೆ ಚುಟುಕು ಕ್ರಿಕೆಟ್ ವಿಶ್ವಕಪ್ ಕೂಟದಲ್ಲಿ ವಿಶ್ವದಾಖಲೆ ಬರೆದಿದೆ. ಟೂರ್ನಿಯಲ್ಲಿ ಯಾವುದೇ ತಂಡಕ್ಕೂ ತಲೆ ಬಾಗದೆ ಎಲ್ಲಾ ಪಂದ್ಯಗಳನ್ನು ಗೆದ್ದು ಕಪ್ ಜಯಿಸಿದ ಏಕಮಾತ್ರ ತಂಡ ಎಂಬ ಹೆಗ್ಗಳಿಕೆಗೆ ಟೀ ಇಂಡಿಯಾ ಪಾತ್ರವಾಗಿದೆ.
ಈ ಬಾರಿ ಟಿ-20 ವಿಶ್ವಕಪ್ ಕೂಟದಲ್ಲಿ ಟೀಂ ಇಂಡಿಯಾ ಹಾಗೂ ಚೋಕರ್ಸ್ ಖ್ಯಾತಿಯ ದಕ್ಷಿಣ ಆಫ್ರಿಕಾ ತಂಡಗಳು ಅಜೇಯವಾಗಿ ಫೈನಲ್ ಹಂತದವರೆಗೂ ಬಂದಿದ್ದವು. ಇದುವರೆಗಿನ ಟಿ-20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು.
ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್ ಪ್ರವೇಶಿಸಿದ್ದರೆ, ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್ ಪ್ರವೇಸಿಸಿತ್ತು. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದ ವಿಶಿಷ್ಟ ಸಾಧನೆ ನಿರ್ಮಾಣವಾಗುತಿತ್ತು. ಅದನ್ನು ಟೀಂ ಇಂಡಿಯಾ ಸಾಧಿಸಿ ತೋರಿಸಿದೆ.
ಕೂಟದಲ್ಲಿ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡಗಳನ್ನು ಬಗ್ಗು ಬಡಿದಿದ್ದರೆ, ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್ 8 ರಲ್ಲಿ ಇಂಗ್ಲೆಂಡ್, ವಿಂಡೀಸ್ ತಂಡವನ್ನು ಮಣಿಸಿತ್ತು. ಸೆಮಿ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಅಫ್ರಿಕಾಗೆ ಸುಲಭ ತುತ್ತಾಗಿತ್ತು.
ಟೀಂ ಇಂಡಿಯಾ 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಆಯೋಜಿಸಿದ ಟ್ರೋಫಿಯನ್ನು ಗೆದ್ದುಕೊಂಡಿತ್ತು. ನಂತರ ಭಾರತ ಕಳೆದ 10 ವರ್ಷಗಳಿಂದ ಪ್ರಶಸ್ತಿಯ ಸನಿಹ ಬಂದು ಅಂತಿಮವಾಗಿ ಎಡವಿ ಅವಕಾಶವನ್ನು ಕೈಚೆಲ್ಲುತ್ತಿತ್ತು. 2013 ರಲ್ಲಿ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಬರ್ಮಿಂಗ್‍ಹ್ಯಾಮ್‍ನ ಎಜ್‍ಬಾಸ್ಟನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 5 ರನ್‍ಗಳಿಂದ ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಟ್ರೋಫಿಯ ಬಳಿಕ ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ ಒಂದೇ ಒಂದು ಟ್ರೋಫಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿಲ್ಲ.
ಅದರಲ್ಲೂ ಕಳೆದ 12 ತಿಂಗಳಿನಲ್ಲಿ ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿತ್ತು. ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಹೋರಾಟದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಸೋತಿತ್ತು. ನಂತರ ಭಾರತದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್‍ನಲ್ಲಿ ಮತ್ತೆ ಆಸೀಸ್ ವಿರುದ್ಧ ಸೋತಿತ್ತು. ಆದರೆ ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ಈ ಬಾರಿ ಟಿ-20 ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
2013 ರ ಬಳಿಕ ಟೀಂ ಇಂಡಿಯಾ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದೆ. 2014ರ ಟಿ-20 ವಿಶ್ವಕಪ್ ಫೈನಲ್‍ನಲ್ಲಿ ಶ್ರೀಲಂಕಾ 6 ವಿಕೆಟ್‍ಗಳ ಜಯ ಸಾಧಿಸಿತ್ತು. 2015 ರ ವಿಶ್ವಕಪ್ ಕೂಟದ ಎರಡನೇ ಸೆಮಿಫೈನಲ್‍ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 328 ರನ್ ಹೊಡೆದರೆ ಭಾರತ 233 ರನ್‍ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು.
2016 ರ ಟಿ-20 ವಿಶ್ವಕಪ್ ಕೂಟದ ಮುಂಬೈಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ರೋಚಕ 7 ವಿಕೆಟ್ ಜಯ ಸಾಧಿಸಿತ್ತು. ಭಾರತ 2 ವಿಕೆಟ್ ನಷ್ಟಕ್ಕೆ 192 ರನ್ ಹೊಡೆದರೆ ವಿಂಡೀಸ್ 19.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಜಯಭೇರಿ ಭಾರಿಸಿತ್ತು. 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಟದ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. ಮೊದಲು ಬ್ಯಾಟ್ ಮಾಡಿದದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 338 ರನ್ ಹೊಡೆದರೆ ಭಾರತ 158 ರನ್‍ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು. 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 239 ರನ್ ಗಳಿಸಿದ್ದರೆ ಭಾರತ 221 ರನ್ ಗಳಿಸಿ ಆಲೌಟ್ ಆಗಿತ್ತು. ಎಂ ಸ್ ಧೋನಿ ರನೌಟ್ ಆಗಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತ್ತು. 92 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 104 ಎಸೆತಗಳಲ್ಲಿ 116 ರನ್ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ವಾಲಿಸಿದ್ದರು. ಧೋನಿ ರನೌಟ್ ಬಲಿಯಾಗುವ ವೇಳೆ ಭಾರತಕ್ಕೆ 10 ಎಸೆತಗಳಲ್ಲಿ 25 ರನ್ ಅಗತ್ಯವಿತ್ತು. ಭಾರತ ಪಂದ್ಯ ಸೋತಿತ್ತು.
2021 ರ ಟಿ-20 ವಿಶ್ವಕಪ್ ಕೂಟದಲ್ಲಿ ಭಾರತ ಅತ್ಯಂತ ಕೆಟ್ಟ ಸಾಧನೆ ಮಾಡಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಭಾರತ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿದ್ದರೆ ಸ್ಕಾಟ್‍ಲ್ಯಾಂಡ್ ವಿರುದ್ಧ ಮಾತ್ರ ಗೆದ್ದಿತ್ತು. 2022 ರ ಟಿ-20 ವಿಶ್ವಕಪ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ 6 ವಿಕೆಟ್ ನಷ್ಟಕ್ಕೆ 168 ರನ್ ಹೊಡೆದರೆ ಇಂಗ್ಲೆಂಡ್ ಕೇವಲ 16 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 170 ರನ್ ಹೊಡೆದು ಜಯಭೇರಿ ಭಾರಿಸಿತ್ತು. 2023 ರ ವಿಶ್ವಕಪ್ ಕೂಟದ ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‍ಗಳ ಜಯಗಳಿಸಿ ಟ್ರೋಫಿ ಜಯಿಸಿತ್ತು. ಭಾರತ 240 ರನ್‍ಗಳಿಗೆ ಆಲೌಟ್ ಆಗಿದ್ದರೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ದಾಖಲಿಸಿತ್ತು.
0 comments:
Post a Comment