ಪ್ರವಾಸಿಗರ ವಿಶ್ರಾಂತಿ ಪ್ರದೇಶವಾಗಿರುವ ವಗ್ಗದಲ್ಲಿರುವ ಶೌಚಾಲಯಕ್ಕೆ ದಾರಿಯೇ ಇಲ್ಲ : ಸೂಕ್ತ ಶೌಚಾಯಲ ನಿರ್ಮಾಣಕ್ಕೆ ಆಗ್ರಹ - Karavali Times ಪ್ರವಾಸಿಗರ ವಿಶ್ರಾಂತಿ ಪ್ರದೇಶವಾಗಿರುವ ವಗ್ಗದಲ್ಲಿರುವ ಶೌಚಾಲಯಕ್ಕೆ ದಾರಿಯೇ ಇಲ್ಲ : ಸೂಕ್ತ ಶೌಚಾಯಲ ನಿರ್ಮಾಣಕ್ಕೆ ಆಗ್ರಹ - Karavali Times

728x90

11 June 2024

ಪ್ರವಾಸಿಗರ ವಿಶ್ರಾಂತಿ ಪ್ರದೇಶವಾಗಿರುವ ವಗ್ಗದಲ್ಲಿರುವ ಶೌಚಾಲಯಕ್ಕೆ ದಾರಿಯೇ ಇಲ್ಲ : ಸೂಕ್ತ ಶೌಚಾಯಲ ನಿರ್ಮಾಣಕ್ಕೆ ಆಗ್ರಹ

ಬಂಟ್ವಾಳ, ಜೂನ್ 11, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಎರಡು ಪುಣ್ಯ ಕ್ಷೇತ್ರಗಳ ಮಧ್ಯದ ಪ್ರವಾಸಿಗರ ವಿಶ್ರಾಂತಿ ತಾಣವಾಗಿ ಗುರುತಿಸಲ್ಪಟ್ಟಿರುವ ವಗ್ಗ ಜಂಕ್ಷನ್ನಿನಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಲು ದಾರಿಯೇ ಇಲ್ಲದೆ ನಿಷ್ಪ್ರಯೋಜಕವಾಗಿದೆ. 

ಬಂಟ್ವಾಳದ ಕಾರಿಂಜ ಕ್ಷೇತ್ರ ಹಾಗೂ ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಇವುಗಳ ಮಧ್ಯೆ ಇರುವ ಪ್ರವಾಸಿಗರ ವಿಶ್ರಾಂತಿ ತಾಣವಾಗಿ ಈ ವಗ್ಗ ಪರಿಸರ ಗುರುತಿಸಿಕೊಂಡಿದೆಯಲ್ಲದೆ, ಬಿ ಸಿ ರೋಡು-ಪೂಂಜಾಲಕಟ್ಟೆ ರಸ್ತೆ ಅಭಿವೃದ್ಧಿ, ಜನರಿಗೆ ಅನುಕೂಲವಾಗುವ ವಾರದ ಸಂತೆ ಇವೆಲ್ಲವುಗಳಿಂದ ವಗ್ಗ ಪರಿಸರ ಪ್ರವಾಸಿಗರಿಂದ ನಿತ್ಯವೂ ಜನ ಸಂಚಾರದ ಜಂಕ್ಷನ್ ಆಗಿ ಗುರುತಿಸಿಕೊಂಡಿದೆ. ವಾರದ ಸಂತೆಯಿಂದಾಗಿ ಕೃಷಿಕರ ಸಂಚಾರವೂ ಜಾಸ್ತಿ ಇದೆ. ಈ ಎಲ್ಲ ರೀತಿಯಲ್ಲಿ ಜಂಕ್ಷನ್ ಆಗಿರುವ ವಗ್ಗದಲ್ಲಿ ಜನರಿಗೆ ಸೂಕ್ತವಾದ ಶೌಚಾಲಯ ಇಲ್ಲದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಇರುವ ಶೌಚಾಲಯಕ್ಕೆ ದಾರಿಯೇ ಯಾವುದು ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಶೌಚಕ್ಕಾಗಿ ನಗರದ ಸಮೀಪದ ಅಂಗಡಿ ಅಥವಾ ಮನೆಗಳಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ. 

ವಗ್ಗ ಜಂಕ್ಷನ್ನಿನ ವಾರದ ಸಂತೆ ನಡೆಯುವ ಬಳಿಯಲ್ಲೇ ಇಕ್ಕಟ್ಟಾದ ಸ್ಥಳದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾದ ಹಳೆಯ ಶೌಚಾಲಯ ಇದ್ದು, ಈ ಶೌಚಾಲಯದ ಕಟ್ಟಡದ ಬಳಿ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇಲ್ಲ. ಒಂದೇ ಕಟ್ಟಡದಲ್ಲಿ ಗಂಡಸರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳಿದ್ದು ಎರಡೂ ಹೀನಾಯ ಸ್ಥಿತಿಯಲ್ಲಿದೆ.

ಬಿ ಸಿ ರೋಡು-ಪೂಂಜಾಲಕಟ್ಟೆ ರಸ್ತೆ ಸದ್ಯ ಪ್ರಯಾಣಿಕಸ್ನೇಹಿ ರಸ್ತೆಯಾಗಿದ್ದು, ಧರ್ಮಸ್ಥಳ, ದಾವಣಗೆರೆ, ಚಿಕ್ಕಮಂಗಳೂರು ಮೊದಲಾದ ಊರುಗಳಿಗೆ ತೆರಳುವ ಪ್ರವಾಸಿ ಪ್ರಯಾಣಿಕರ ಸಂಖ್ಯೆಯೂ ಈ ರಸ್ತೆಯಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕಾರಿಂಜ ಕ್ಷೇತ್ರಕ್ಕೆ ತೆರಳಲು ಮಧ್ಯೆ ವಿಶ್ರಾಂತಿ ಪ್ರದೇಶವಾಗಿಯೂ ಇದು ಗುರುತಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಆಡಳಿತದ ಕರ್ತವ್ಯವಾಗಿದೆ. ಇದರಿಂದ ವಗ್ಗ ಜಂಕ್ಷನ್ನಿನಲ್ಲಿ ಸುಸಜ್ಜಿತ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಹಾಗೂ ಸ್ಥಳೀಯ ಸಾರ್ವಜನಿಕರ ಆಗ್ರಹವಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪ್ರವಾಸಿಗರ ವಿಶ್ರಾಂತಿ ಪ್ರದೇಶವಾಗಿರುವ ವಗ್ಗದಲ್ಲಿರುವ ಶೌಚಾಲಯಕ್ಕೆ ದಾರಿಯೇ ಇಲ್ಲ : ಸೂಕ್ತ ಶೌಚಾಯಲ ನಿರ್ಮಾಣಕ್ಕೆ ಆಗ್ರಹ Rating: 5 Reviewed By: karavali Times
Scroll to Top