ಪಾಣೆಮಂಗಳೂರು-ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭ
ಬಂಟ್ವಾಳ, ಆಗಸ್ಟ್ 28, 2024 (ಕರಾವಳಿ ಟೈಮ್ಸ್) : ಬೂಬಾಟಿಕೆ ಬಿಟ್ಟು ಸ್ಥಳೀಯ ಮಟ್ಟದಲ್ಲಿ ಪಕ್ಷಕ್ಕಾಗಿ ತಳಮಟ್ಟದಿಂದ ಕೆಲಸ ಮಾಡಿದವರಿಗೆ ನಾಯಕತ್ವ ಕೊಡುವುದು ಪಕ್ಷದ ಉದ್ದೇಶ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಸಭಾಂಗಣದಲ್ಲಿ ಬುಧವಾರ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರುಗಳಾದ ಡಿ ಚಂದ್ರಶೇಖರ ಭಂಡಾರಿ ಮತ್ತು ಬಾಲಕೃಷ್ಣ ಆರ್ ಅಂಚನ್ ಹಾಗೂ ಎನ್ ಎಸ್ ಯು ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ನೂತನ ಅಧ್ಯಕ್ಷ ಮುಹಮ್ಮದ್ ಸಫ್ವಾನ್ ಸರವು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ಸುಧಾಕರ ಶೆಣೈ ಖಂಡಿಗ ನೇತೃತ್ವದ ಬಂಟ್ವಾಳ ಕ್ಷೇತ್ರದ ಕಿಸಾನ್ ಘಟಕ ಹಾಗೂ ಚಂದ್ರಶೇಖರ ಆಚಾರ್ಯ ನೇತೃತ್ವದ ಬಂಟ್ವಾಳ ಕ್ಷೇತ್ರದ ಕಾರ್ಮಿಕ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೂಡಾ ಪಕ್ಷದ ತಳಮಟ್ಟದಲ್ಲಿ ಸಂಘಟನೆ ಮಾಡಿಕೊಂಡು ಬಂದವ. ಮಂತ್ರಿ ಆದರೂ ನಾನು ಹೆಚ್ಚಿನ ಸಮಯ ಸ್ಥಳೀಯ ಕಾರ್ಯಕರ್ತರೊಂದಿಗೆ ಇದ್ದು ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಈ ನಿಟ್ಟಿನಲ್ಲಿ ಇದೀಗ ಪದಗ್ರಹಣ ನಡೆಸುವ ಬ್ಲಾಕ್ ಅಧ್ಯಕ್ಷರುಗಳು ಕೂಡಾ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ವಲಯ ಕಾಂಗ್ರೆಸ್ ಸಾರಥ್ಯ ವಹಿಸಿ ಪಕ್ಷ ಸಂಘಟಿಸಿದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಅವರಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಇಡೀ ರಾಜ್ಯದಲ್ಲೇ ಬಂಟ್ವಾಳದಲ್ಲಿ ಎರಡೂ ಬ್ಲಾಕ್ ಸಮಿತಿಗಳಿಗೂ ಪ್ರತ್ಯೇಕ ಕಟ್ಟಡ ಇರುವುದು ಸಂತೋಷ ಇದೆ. ಜಿಲ್ಲಾ ಮಟ್ಟದಲ್ಲೂ ಸ್ವಂತ ಕಚೇರಿ ಮಾಡಿಯೇ ಅಧ್ಯಕ್ಷಗಿರಿ ಬಿಟ್ಟುಕೊಟ್ಟಿದ್ದೇನೆ. ನಾಯಕರಲ್ಲಿ ಇಚ್ಚಾಶಕ್ತಿ ಇದ್ರೆ ಇವತ್ತೂ ಕೂಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಸಾರಿದ ರಮಾನಾಥ ರೈ ಅವರು, ನಾವು ಸೋತಿರಬಹುದು ಆದರೆ ನಾವು ಸತ್ತಿಲ್ಲ. ಪ್ರಾಮಾಣಿಕವಾಗಿ ದುಡಿದು ಸೋತಿದ್ದೇವೆ ಅಷ್ಟೆ ಎಂದು ಸೋಲಿನಲ್ಲೂ ಜನರಿಗಾಗಿ ಸೇವೆಗೈದ ಆತ್ಮ ಸಂತೃಪ್ತಿ ಇದೆ ಎಂದರು.
ನಾವು ಕಾಂಗ್ರೆಸ್ ಪಕ್ಷವಾಗಿ ಮುಸ್ಲಿಂ ಸಂಘಟನೆ ಜೊತೆ ಹೊಂದಾಣಿಕೆ ಮಾಡಿ ಪುರಸಭೆಯ ಅಧಿಕಾರ ಪಡೆದಿರುವುದರಲ್ಲಿ ತಪ್ಪೇನು? ಈ ಹಿಂದೆ ಪುರಸಭೆಯಲ್ಲಿ ಮುಸ್ಲಿಂ ಲೀಗಿನ ಬೆಂಬಲ ಪಡೆದು ದಿನೇಶ್ ಭಂಡಾರಿ ಅಧ್ಯಕ್ಷರಾಗುವಾಗ ಅವರ ಡಿ ಎನ್ ಎ ಯಾವುದಿತ್ತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದ ರಮಾನಾಥ ರೈ ದ್ವೇಷದ ರಾಜಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ ಎ ಬಾವಾ, ಪದ್ಮರಾಜ್ ಆರ್ ಪೂಜಾರಿ, ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಪ್ರಮುಖರಾದ ಹಾಜಿ ಬಿ ಎಚ್ ಖಾದರ್, ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಪದ್ಮನಾಭ ರೈ, ಜಯಂತಿ ಪೂಜಾರಿ, ಎಂ ಎಸ್ ಮುಹಮ್ಮದ್, ಮೋಹನ್ ಗೌಡ ಕಲ್ಮಂಜ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸುಹಾನ್ ಆಳ್ವ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿಲ್ಮಾ ಮೊರಾಸ್, ಸುರೇಶ್ ಜೋರಾ, ಬೇಬಿ ಕುಂದರ್, ಇಬ್ರಾಹಿಂ ನವಾಝ್ ಬಡಕಬೈಲು, ಸುದರ್ಶನ್ ಜೈನ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ನಿರ್ಗಮನ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment