ಬಂಟ್ವಾಳ, ಆಗಸ್ಟ್ 05, 2024 (ಕರಾವಳಿ ಟೈಮ್ಸ್) : ಬಾರಿಗೆ ಬಂದ ಗ್ರಾಹಕರು ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಬಾರ್ ಮಾಲಕ, ಮ್ಯಾನೇಜರ್ ಹಾಗೂ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ ದಾಂಧಲೆ ನಡೆಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಎಂಬಲ್ಲಿನ ಪ್ರಕಾಶ್ ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.
ಹಲ್ಲೆಗೊಳಗಾದವರನ್ನು ಅಜ್ಜಿಬೆಟ್ಟು ಗ್ರಾಮ ಪಾಂಗಲ್ಪಾಡಿ-ಅಲೆಕ್ಕಿ ನಿವಾಸಿ, ಬಾರ್ ಮಾಲಕ ಪ್ರಭಾಕರ್ ಶೆಟ್ಟಿ (55), ಮ್ಯಾನೇಜರ್ ಗಳಾದ ಸುನೀಲ್, ಜಗದೀಶ್, ವಿಜಯ್ ಹಾಗೂ ಸಿಬ್ಬಂದಿ ಕೇಶವ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ವಿಶ್ವನಾಥ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ.
ಪ್ರಭಾಕರ್ ಶೆಟ್ಟಿ ಅವರು 6 ತಿಂಗಳಿನಿಂದ ಇಲ್ಲಿ ಈ ಬಾರ್ ನಡೆಸುತ್ತಿದ್ದು, ಭಾನುವಾರ ರಾತ್ರಿ ಬಾರಿನ ಗ್ರಾಹಕರ ಕ್ಯಾಬಿನಿನಲ್ಲ ಕುಳಿತಿದ್ದ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಹಲ್ಲೆ ನಡೆಸಿದ್ದು, ಬಳಿಕ ಬಾರಿನಲ್ಲಿ ದಾಂಧಲೆ ನಡೆಸಿದ ಪರಿಣಾಮ ಸೊತ್ತುಗಳಿಗೆ ಹಾನಿಯಾಗಿದ್ದು, ಸುಮಾರು 2.5 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ ಎಂದು ದೂರಲಾಗಿದೆ.
ಗಾಯಾಳುಗಳನ್ನು ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗಾಯಾಳುಗಳ ಪೈಕಿ ಜಗದೀಶ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾರ್ ಮಾಲಕ ಪ್ರಭಾಕರ ಶೆಟ್ಟಿ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2024 ಕಲಂ 115(2), 118, 324(5), 351(2), 352 ಜೊತೆಗೆ 3(5) ಬಿ ಎನ್ ಎಸ್ ಕಾಯಿದೆ 2023 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment