ಬಂಟ್ವಾಳ, ಸೆಪ್ಟೆಂಬರ್ 19, 2024 (ಕರಾವಳಿ ಟೈಮ್ಸ್) : ಅವೈಜ್ಞಾನಿಕ ಪೈಪ್ ಲೈನ್, ಹೆದ್ದಾರಿ ಕಾಮಗಾರಿಯಿಂದಾಗಿ ಮೆಲ್ಕಾರ್, ಬಿ ಸಿ ರೋಡಿನ ಕೆಲ ಭಾಗಗಳಿಗೆ ಕಳೆದ 10 ದಿನಗಳಿಂದ ಕುಡಿಯುವ ನೀರು ಸಮರ್ಪಕ ಸರಬರಾಜಿಲ್ಲದೆ ಜನ ನೀರಿಗಾಗಿ ಅಲೆದಾಟ ನಡೆಸುತ್ತಿದ್ದಾರೆ ಎಂದು ಸದಸ್ಯ ಗೋವಿಂದ ಪ್ರಭು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ನಡುವೆ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸುವ ಕುರಿತ ಪತ್ರ ಸಂಬಂಧಪಟ್ಟ ಇಲಾಖೆಯಿಂದ ಪುರಸಭೆಗೆ ಬಂದಿದ್ದರೂ ಇಂತಹ ಗಂಭೀರ ವಿಚಾರವನ್ನು ಸಾಮಾನ್ಯ ಸಭೆಯ ಅಜೆಂಡಾದಲ್ಲಿರಿಸದ ಬಗ್ಗೆ ಅವರು ಪುರಸಭಾಧ್ಯಕ್ಷರು ಹಾಗೂ ಇಂಜಿನಿಯರ್ ಅವರನ್ನು ತರಾಟೆಗೆಳೆದರು.
ಈ ಸಂದರ್ಭ ಪ್ರತಿಕ್ರಯಿಸಿದ ಅಧ್ಯಕ್ಷ ವಾಸು ಪೂಜಾರಿ ಅವರು ಪತ್ರ ಬಂದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ ಎಂದರು. ಓರ್ವ ಸಾಮಾನ್ಯ ಸದಸ್ಯನಿಗೆ ಮಾಹಿತಿ ದೊರೆಯುವಾಗ ಈ ಬಗ್ಗೆ ಅಧ್ಯಕ್ಷರಿಗೆ ಗೊತ್ತಿಲ್ಲ ಎನ್ನುವುದೇ ಅಶ್ಚರ್ಯ ಎಂದು ಪ್ರಭು ತಿರುಗೇಟು ನೀಡಿದರು.
ಅರೆ ಬರೆ ಕಾಮಗಾರಿ, ಪೈಪ್ ಲೈನ್ ಅವ್ಯವಸ್ಥೆ, ಯೋಜನೆ ಕಾರ್ಯಗತಗೊಂಡು ಐದು ವರ್ಷಕಳೆದರೂ ಇನ್ನು ಜನರಿಗೆ ಸರಿಯಾಗಿ 1 ತಾಸು ನೀರು ಕೊಡಲಾಗದಿರುವುರಿಂದ ಇದು 24*7 ಆಗಿರದೆ 1*23 ಯೋಜನೆ ಎಂದು ಗೋವಿಂದ ಪ್ರಭು ವ್ಯಂಗ್ಯವಾಡಿದರು.
ಪ್ರಭು ಅವರ ಗಂಭೀರ ವಿಷಯಕ್ಕೆ ಆಡಳಿತ ಪಕ್ಷದ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ರಾಮಕೃಷ್ಣ ಆಳ್ವ ಹಾಗೂ ಜೆಸಿಂತಾ ಡಿಸೋಜ ಅವರು ಧ್ವನಿಗೂಡಿಸಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಅಧ್ಯಕ್ಷ ವಾಸು ಪೂಜಾರಿ ಅವರು ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಕೆಯುಡಬ್ಲ್ಯುಎಸ್ ಇಂಜಿನಿಯರ್ ಹಾಗೂ ಸದಸ್ಯರನ್ನೊಳಗೊಂಡು ಶೀಘ್ರದಲ್ಲೇ ವಿಶೇಷ ಸಭೆ ಕರೆಯುವುದಾಗಿ ಸ್ಪಷ್ಟನೆ ನೀಡಿದರು.
ಕಳೆದ ಒಂದೂವರೆವರ್ಷ ಆಡಳಿತಾಧಿಕಾರಿ ಅವಧಿಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ಧನ ಪಾವತಿಸದ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ತಗಾದೆ ಎತ್ತಿದ ಪ್ರಸಂಗವೂ ಸಭೆಯಲ್ಲಿ ನಡೆಯಿತು. ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಗೌರವ ಧನ ಪಾವತಿಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಈ ಸಾಮಾನ್ಯ ಸಭೆಯ ಗೌರವಧನ ಸ್ವೀಕರಿಸುವುದಿಲ್ಲ ಎಂದು ಸದಸ್ಯರು ಪಟ್ಟುಹಿಡಿದರು.
ಆಡಳಿತಪಕ್ಷದ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಹಸೈನಾರ್, ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಈ ಬಗ್ಗೆ ಪ್ರಸ್ತಾವಿಸಿ ಬಂಟ್ವಾಳ ಹೊರತುಪಡಿಸಿ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಆಡಳಿತಾಧಿಕಾರಿ ಅವಧಿಯಲ್ಲೂ ಗೌರವಧನ ನೀಡಲಾಗಿದೆ. ಆದರೆ ಬಂಟ್ವಾಳದಲ್ಲಿ ಮಾತ್ರ ಯಾಕೆ ಹೀಗೆ ಎಂದು ಪ್ರಶ್ನಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷ ವಾಸು ಪೂಜಾರಿ ತಕ್ಷಣ ಯೋಜನಾ ಕೋಶದ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ನಂತರ ಚರ್ಚೆ ಮುಕ್ತಾಯಗೊಂಡಿತು.
ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶಗಳಲ್ಲಿ ಪಕ್ಕದ ಪಂಚಾಯತ್ ವ್ಯಾಪ್ತಿಯ ಜನರು ತ್ಯಾಜ್ಯ-ಕಸ ತಂದು ರಾಶಿ ಹಾಕುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಪಾಣೆಮಂಗಳೂರಿನ ಎಸ್ ಎಲ್ ಎನ್ ಪಿ ಹಾಗೂ ಶ್ರೀ ಶಾರದಾ ಹೈಸ್ಕೂಲ್ ಬಳಿ, ಲೊರೆಟ್ಟೋಪದವು, ತಲಪಾಡಿ ಮೊದಲಾದ ಗಡಿ ಪ್ರದೇಶದಲ್ಲಿ ಪಂಚಾಯತ್ ವ್ಯಾಪ್ತಿಯ ಜನರು ಕಸ ತಂದು ರಾಶಿಹಾಕುವುದರಿಂದ ಆರೋಗ್ಯ ಸಮಸ್ಯೆ ತಲೆದೋರುತ್ತಿದೆ. ಅದೇ ರೀತಿ ಪಾಣೆಮಂಗಳೂರು ಪರಿಸರದಲ್ಲಿ ಸಮರ್ಪಕ ಕಸ ವಿಲೇವಾರಿಯೂ ಆಗುತ್ತಿಲ್ಲ, ಪರಿಸರವಿಡೀ ರ್ದುನಾತ ಬೀರುತ್ತಿದೆ. ಇದರಿಂದಾಗಿ ರೋಗದ ಭೀತಿಯು ಎದುರಾಗಿದೆ ಎಂದು ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಸಿದ್ದೀಕ್ ಪಿ ಜೆ, ಪಿ ರಾಮಕೃಷ್ಣ ಅಳ್ವ ಅವರು ಗಂಭೀರವಾಗಿ ವಿಷಯ ಪ್ರಸ್ತಾಪನೆಗೈದರು. ಸೀಸಿ ಕ್ಯಾಮರಾ ಅಳವಡಿಸಿದರೂ ಕಸ ಎಸೆಯುವುದು ನಿಂತಿಲ್ಲ. ಸೀಸಿ ಕ್ಯಾಮರವೂ ಚಾಲೂ ಇಲ್ಲ. ಈ ವಿಚಾರ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂದು ಅಧ್ಯಕ್ಷ ವಾಸು ಪೂಜಾರಿ ಸಭೆಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಮೂನಿಶ್ ಅಲಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿದ್ದರು. ಆರೋಗ್ಯ ನಿರೀಕ್ಷಕ ರತ್ನ ಪ್ರಸಾದ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಿಬ್ಬಂದಿಗಳಾದ ಅಬ್ದುಲ್ ರಝಾಕ್, ಉಮಾವತಿ ಮೊದಲಾದವರು ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಸದಸ್ಯರುಗಳಾದ ಶಶಿಕಲಾ, ವಿದ್ಯಾವತಿ, ದೇವಕಿ, ಲೋಲಾಕ್ಷ ಶೆಟ್ಟಿ, ಝೀನತ್ ಫಿರೋಝ್, ಮಹಮ್ಮದ್ ನಂದರಬೆಟ್ಟು, ಜಯರಾಮ ನಾಯ್ಕ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.
0 comments:
Post a Comment