ಬಂಟ್ವಾಳ, ಸೆಪ್ಟೆಂಬರ್ 19, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಮೇರೆ ಮೀರಿರುವ ತ್ಯಾಜ್ಯ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವ ಇರಾದೆ ಇದ್ದು ಈ ಬಗ್ಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿರುವ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಭರವಸೆ ನೀಡಿದ್ದಾರೆ.
ಪತ್ರಿಕೆ ಜೊತೆ ಮಾತನಾಡಿರುವ ಅವರು, ಸರ್ವ ಪುರವಾಸಿಗಳು ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು. ತ್ಯಾಜ್ಯ ಸಮಸ್ಯೆ ಇರುವ ಬಗ್ಗೆ ಹಾಗೂ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನ ಬರದ ಬಗ್ಗೆ ತಗಾದೆಗಳು ಏನಾದರೂ ಇದ್ದರೆ ಪುರವಾಸಿಗಳು ನೇರವಾಗಿ ನನ್ನನ್ನೇ ಮೊಬೈಲ್ ಮೂಲಕ (ಮೊಬೈಲ್ ಸಂಖ್ಯೆ 9900231599) ಸಂಪರ್ಕಿಸಿ ಸಮಸ್ಯೆ ಬಗ್ಗೆ ಗಮನ ಸೆಳೆಯಬಹುದು. ಈ ಬಗ್ಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
ಗಡಿ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತ್ಯಾಜ್ಯ-ಕಸ ತಂದು ಎಸೆಯುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪಂಚಾಯತ್ ಆಡಳಿತಕ್ಕೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಕೂಡಾ ತ್ಯಾಜ್ಯ ಸಮಸ್ಯೆ ಬಗ್ಗೆ ಸ್ಥಳೀಯಾಡಳಿತೊಂದಿಗೆ ಸಹಕರಿಸಬೇಕು. ಆ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿರುವ ಪುರಸಭಾಧಕ್ಷರು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಇರುವ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಇಲ್ಲಿನ ತ್ಯಾಜ್ಯಗಳನ್ನು ತಕ್ಷಣ ವಿಲೇವಾರಿ ಮಾಡಿ ಬಳಿಕ ತ್ಯಾಜ್ಯ ಬೇಕಾಬಿಟ್ಟಿ ಎಸೆಯದಂತೆ ನೆಟ್ ಅಥವಾ ತಗಡು ಶೀಟು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕ್ರಮ ಆಗುವವರೆಗೆ ತ್ಯಾಜ್ಯ ಎಸೆಯದಂತೆ ತಡೆಯಲು ಸ್ಥಳದಲ್ಲಿ ಹೋಂ ಗಾರ್ಡ್ ನೇಮಕಗೊಳಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
0 comments:
Post a Comment