ಬಂಟ್ವಾಳ, ಸೆಪ್ಟೆಂಬರ್ 22, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಘಟಕವು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ-2024 ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ಮಂಚಿ-ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಘಟಕದ ಗೌರವ ಕಾರ್ಯದರ್ಶಿ ವಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಾಹಿತ್ಯ ಸಮ್ಮೇಳನವೆಂದರೆ ಅದು ಅವಿಸ್ಮರಣೀಯವಾಗಿ ಉಳಿಯುವಂಥದ್ದಾಗಿದೆ. ಹೋಬಳಿ, ತಾಲೂಕು, ಜಿಲ್ಲೆ ಅಥವಾ ಅಖಿಲ ಭಾರತ ಸಮ್ಮೇಳನವೆಂದು ತಾರತಮ್ಯ ಮಾಡಬೇಕಿಲ್ಲ. ಎಲ್ಲೆಡೆಯ ಸಾಹಿತ್ಯ ಪ್ರತಿಭೆಗಳಿಗೆ ಅವಕಾಶವೆಂಬ ವೇದಿಕೆ ಸಿದ್ಧವಾಗಬೇಕಾಗಿದೆ. ಮಂಚಿಯಂತಹ ಗ್ರಾಮೀಣ ಪ್ರದೇಶದಲ್ಲಿ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜನೆಗೆ ಮನಸು ಮಾಡಿರುವ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಇಲ್ಲಿನ ನಾಗರಿಕರು ಅಭಿನಂದನಾರ್ಹರು ಎಂದರು.
ಇದೇ ವೇಳೆ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಮಿತಿಯನ್ನು ರಚನೆ ಮಾಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಹಾಜಿ ಸುಲೈಮಾನ್ ನಾರ್ಶ, ಅಧ್ಯಕ್ಷರಾಗಿ ಲಯನ್ ಸತೀಶ್ ಆಳ್ವ ಬಾಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಉಪನ್ಯಾಸಕ ಎಂ ಡಿ ಮಂಚಿ, ಕೋಶಾಧಿಕಾರಿಯಾಗಿ ಹಾಜಿ ಸುಲೈಮಾನ್ ಜಿ ಸುರಿಬೈಲು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ, ಜೊತೆ ಕಾರ್ಯದರ್ಶಿ ಹಾಗೂ ಇನ್ನಿತರ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಕೋಶಾಧಿಕಾರಿ ಡಿ ಬಿ ಅಬ್ದುಲ್ ರಹಿಮಾನ್, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಎಂ ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಕೊಳ್ನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಸುಶೀಲ ವಿಟ್ಲ ಭಾಗವಹಿಸಿದ್ದರು.
ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಯನ್ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಮತ್ತು ಉಪನ್ಯಾಸಕ ಎಂ ಡಿ ಮಂಚಿ ಪ್ರಾಸ್ತಾವನೆಗೈದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ವಂದಿಸಿದರು. ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಘಟಕದ ಗೌರವ ಕಾರ್ಯದರ್ಶಿ ಲಯನ್ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment