ಬಂಟ್ವಾಳ, ಅಕ್ಟೋಬರ್ 02, 2024 (ಕರಾವಳಿ ಟೈಮ್ಸ್) : ಖಾದಿ ಗ್ರಾಮೋದ್ಯೋಗಕ್ಕೆ ಪ್ರಾಮುಖ್ಯತೆ ನೀಡಿ ಗ್ರಾಮೀಣ ಜನರ ಹಾಗೂ ಗೃಹ ಕೈಗಾರಿಕೆಗಳಿಗೆ ಬಲ ನೀಡಿದಲ್ಲಿ ದೇಶದ ಆರ್ಥಿಕತೆಗೆ ಬಲ ನೀಡಿದಂತಾಗುತ್ತದೆ ಎಂಬ ಮಹಾತ್ಮ ಗಾಂಧಿಯವರ ಆಶಯವನ್ನು ಪಾಲಿಸಬೇಕಾದ ಅಗತ್ಯತೆ ಇದೆ ಎಂದು ಬಂಟ್ವಾಳ ಎಸ್ ವಿ ಎಸ್ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಿವಣ್ಣ ಪ್ರಭು ಅಭಿಪ್ರಾಯಪಟ್ಟರು.
ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಕಾಲೇಜು ಎನ್ ಎಸ್ ಎಸ್ ಘಟಕದ ವತಿಯಿಂದ ‘ಸ್ವಚ್ಛತಾ ಹಿ ಸೇವಾ’ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗ ವರ್ಧನ್ ಡಿ ಎಂ ಮಾತನಾಡಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆನಂದವುಂಟಾಗುತ್ತದೆ. ಮನುಷ್ಯನಾದವನು ಜೀವನದಲ್ಲಿ ಸೇವಾ ಮನೋಭಾವವನ್ನು ಬೆಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವ ಎಲ್ಲಾ ವಯೋಮಾನದವರಿಗೂ ಆಕರ್ಷಣೀಯವಾದುದು. ಹಾಗಾಗಿಯೇ ಅವರನ್ನು ಗಾಂಧಿ ತಾತ, ಬಾಪೂಜಿ, ಮಹಾತ್ಮ ಗಾಂಧಿ ಎಂದು ಹಲವು ಹೆಸರುಗಳಿಂದ ಕರೆಯಲಾಗಿದೆ ಎಂದರು.
ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಸ್ವಾಗತಿಸಿದರು. ಉಪನ್ಯಾಸಕರಾದ ಲಕ್ಷ್ಮಣ್ ವಂದಿಸಿ, ಮನೋಹರ್ ಎಸ್ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಕು ಹೇಮಲತಾ ಪ್ರಾರ್ಥಿಸಿದರು.
ಕಾರ್ಯಕ್ರಮದ ನಂತರ ‘ಸ್ವಚ್ಛತಾ ಹಿ ಸೇವಾ’ ಯೋಜನೆಯಡಿ ಎನ್ ಎಸ್ ಎಸ್ ಸ್ವಯಂ ಸೇವಕರು ಕಾಲೇಜು ಪರಿಸರ ಸ್ವಚ್ಛಗೊಳಿಸಿದರು.
0 comments:
Post a Comment