ಕರ್ನಾಟಕದ ಕ್ರಾಂತಿಕಾರಿ ದುಡಿಯುವ ವರ್ಗದ ಕಾರ್ಮಿಕ ಸಂಘಟನೆ ಎಐಸಿಸಿಟಿಯು ಇದರ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ - Karavali Times ಕರ್ನಾಟಕದ ಕ್ರಾಂತಿಕಾರಿ ದುಡಿಯುವ ವರ್ಗದ ಕಾರ್ಮಿಕ ಸಂಘಟನೆ ಎಐಸಿಸಿಟಿಯು ಇದರ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ - Karavali Times

728x90

22 November 2024

ಕರ್ನಾಟಕದ ಕ್ರಾಂತಿಕಾರಿ ದುಡಿಯುವ ವರ್ಗದ ಕಾರ್ಮಿಕ ಸಂಘಟನೆ ಎಐಸಿಸಿಟಿಯು ಇದರ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ

ನವೆಂಬರ್ 24-25 ರಂದು ಬಿ.ಸಿ.ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ : ಮುಂದಿನ ದಾರಿ” ಧ್ಯೇಯ ವಾಕ್ಯದಲ್ಲಿ ಅಧಿವೇಶನ


ಬಂಟ್ವಾಳ, ನವೆಂಬರ್ 22, 2024 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಹಲವು ದಶಕಗಳಿಂದಲೂ ಕಾರ್ಮಿಕರೊಡಗೂಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಶ್ರಮ ಜೀವಿಗಳ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವ ಎಐಸಿಸಿಟಿಯು ತನ್ನ ಮೊದಲನೆಯ ರಾಜ್ಯ ಸಮ್ಮೇಳನವನ್ನು ನವಂಬರ್ 24 ಭಾನುವಾರ ಹಾಗೂ ನವೆಂಬರ್ 25 ರಂದು ಸೋಮವಾರ ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ. ಈ ಸಮ್ಮೇಳನವು ದೇಶದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಪರಿಚಯಿಸಿದ ನಂತರ, ಕಾರ್ಮಿಕ ವರ್ಗವು ನವ ಉದಾರೀಕರಣ ನೀತಿಗಳ ದಾಳಿಯಿಂದ ಚೇತರಿಸಿಕೊಳ್ಳದೇ ಇರುವ ಇಂದಿನ ಪರಿಸ್ಥಿತಿಯಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಕಾರ್ಮಿಕ ವರ್ಗದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಇಡೀ ಕಾರ್ಮಿಕ ವರ್ಗವನ್ನೆ ಅಸಂಘಟಿತ ವಲಯಕ್ಕೆ ತಳ್ಳುತ್ತಿರುವ ತಂತ್ರಗಾರಿಕೆಗಳನ್ನು ನೋಡುತ್ತಿದ್ದೇವೆ. ಉದ್ಯೋಗ ಬಯಸಿ ಬರುತ್ತಿರುವ ಕಾರ್ಮಿಕರೆಲ್ಲರು ಅಸಂಘಟಿತ ವಲಯದಲ್ಲಿ ಕಂಡು ಬರುತ್ತಿರುವುದರಿಂದ, ಅವರಿಗೆ ಸ್ಥಿರವಾದ ವೇತನ, ಉದ್ಯೋಗ ಭದ್ರತೆ, ಮತ್ತು ಸಾಮಾಜಿಕ ಭದ್ರತೆಗಳಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಲಿಂಗ ಮತ್ತು ಜಾತಿ ತಾರತಮ್ಯ, ಪಿತೃಪ್ರಭುತ್ವ ಮತ್ತು ಜಾತಿ ಸಮುದಾಯದ ಅಸಮಾನತೆಗಳು ಹೊಸ ಹೊಸ ರೂಪಗಳಲ್ಲಿ ಹೊರ ಹೊಮ್ಮುತ್ತಿವೆ. ಸಮಾನ ವೇತನ ನಿರಾಕರಣೆ ಮತ್ತು ಅನ್ಯಾಯಯುತ ಕೆಲಸದ ಪರಿಸ್ಥಿತಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರಿ ಸೇವೆಗಳಲ್ಲಿ ಸುರಕ್ಷಿತ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸ್ಥಾಪನೆಯ ಮೂಲಕ ಕಾರ್ಮಿಕ ಕಾನೂನು ಆಡಳಿತವನ್ನು ಅಳವಡಿಸಲು ಮಾಡಿದ ಪ್ರಯತ್ನಗಳು ಇಂದು ಹಿಂದೆ ಬಿದ್ದಂತೆ ಕಾಣುತ್ತವೆ. ಇದೀಗ, ಖಾಸಗಿ ವಲಯದಲ್ಲಿ ಕಾರ್ಮಿಕರ ಹಕ್ಕುಗಳು ಕಣ್ಮರೆಯಾಗುತ್ತಿವೆ. ಆರ್ಥಿಕ ಉದಾರೀಕರಣದ ಈ ಹೊಸ ಘಟ್ಟದಲ್ಲಿ, ಕಾರ್ಮಿಕರು ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗಾಗಿ ಹಾಗೂ ಖಾಸಗೀ ವಲಯದಲ್ಲಿ ಕಾರ್ಮಿಕ ಕಾನೂನನ್ನು ಬಲಪಡಿಸುವಂತೆ ಒತ್ತಾಯಿಸಲು ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು ನವೆಂಬರ್ 24 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ ಸಿ ರೋಡಿನ ಕೈಕಂಬದಿಂದ ಶ್ರಮಜೀವಿಗಳ ಅಧಿಕಾರದತ್ತ ಜಾಥಾದಿಂದ ಶುರುವಾಗಲಿದ್ದು, ನಂತರ ಡಾ  ಬಿ ಆರ್ ಅಂಬೇಡ್ಕರ್ ಭವನದಲ್ಲಿ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ : ಮುಂದಿನ ದಾರಿ” ಬಹಿರಂಗ ಸಭೆ ನಡೆಯಲಿದೆ. ಪ್ರತಿನಿಧಿ ಅಧಿವೇಶನವು ಎರಡೂ ದಿನಗಳ ಕಾಲ ನಡೆಯಲಿದೆ.

ಈ ಸಮ್ಮೇಳನಕ್ಕೆ ಎಐಸಿಸಿಟಿಯು ರಾಷ್ಟೀಯ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ದಿಮ್ರಿ, ರಾಷ್ಟ್ರೀಯ ಅಧ್ಯಕ್ಷ ಕಾಮ್ರೇಡ್ ಶಂಕರ್ ಹಾಗೂ ರಾಜ್ಯದ  ಮುಖಂಡರು ಭಾಗವಹಿಸಲಿದ್ದಾರೆ. ಹಾಗೂ ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಎಐಸಿಸಿಟಿಯು ಸದಸ್ಯರಾದ ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಬಿಸಿ ಊಟ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು, ಎನ್ ಎ ಎಲ್, ಡಿ ಆರ್ ಡಿ ಒ, ಐಟಿಐ ಅಂತಹ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಹಾಗೂ ವಿವಿಧ ರಂಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕಾಮ್ರೇಡ್ ರಾಮಣ್ಣ ವಿಟ್ಲ, ಕಾರ್ಯದರ್ಶಿ ಕಾಮ್ರೇಡ್ ಕೆ ಇ ಮೋಹನ್ ಅವರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕದ ಕ್ರಾಂತಿಕಾರಿ ದುಡಿಯುವ ವರ್ಗದ ಕಾರ್ಮಿಕ ಸಂಘಟನೆ ಎಐಸಿಸಿಟಿಯು ಇದರ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ Rating: 5 Reviewed By: karavali Times
Scroll to Top