ಪುತ್ತೂರು, ಫೆಬ್ರವರಿ 05, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟು, ಸಹಸವಾರ ಹಾಗೂ ಅಟೋ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಬಕ ಗ್ರಾಮದ ಮುರ ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಚೇತನ್ ಕುಮಾರ್ ಎಂದು ಹೆಸರಿಸಲಾಗಿದ್ದು, ಗಾಯಗೊಂಡ ಸಹಸವಾರನನ್ನು ಮನೀಶ್ (10) ಹಾಗೂ ಅಟೋ ಚಾಲಕ ಮಹಮ್ಮದ್ ತೌಫೀಕ್ ಎಂದು ಹೆಸರಿಸಲಾಗಿದೆ.
ಮುಹಮ್ಮದ್ ತೌಫೀಕ್ ಅವರು ಚಲಾಯಿಸುತ್ತಿದ್ದ ಅಟೋ ರಿಕ್ಷಾ ಕಬಕ ಸಮೀಪದ ಮುರ ಎಂಬಲ್ಲಿ ಚೇತನ್ ಕುಮಾರ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಬೈಕ್ ಸವಾರರು ಕೂಡಾ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಚೇತನ್ ಕುಮಾರ್ ಮೃತಪಟ್ಟಿದ್ದಾರೆ.
ಗಾಯಾಳುಗಳಾದ ಸಹಸವಾರ ಮನೀಶ್ ಹಾಗೂ ಅಟೋ ಚಾಲಕ ತೌಫೀಕ್ ಇಬ್ಬರೂ ಕೂಡಾ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಟೋ ಚಾಲಕನ ಅಜಾರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment