ಬಂಟ್ವಾಳ, ಮಾರ್ಚ್ 17, 2025 (ಕರಾವಳಿ ಟೈಮ್ಸ್) : ಮದ್ಯ ಸೇವನೆಯ ಚಟ ಹೊಂದಿದ್ದ ವ್ಯಕ್ತಿಯೋರ್ವರು ಮನೆ ಸಮೀಪದ ಗುಡ್ಡೆಗೆ ಹೋಗಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜಿಪಮುನ್ನೂರು ಗ್ರಾಮದ ಬೊಳ್ಳಾಯಿ ಸಮೀಪದ ಕೋಮಾಲಿ ಎಂಬಲ್ಲಿ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಉಮೇಶ ಸಪಲ್ಯ (47) ಎಂಬವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅಡಿಕೆ ಹಾಗೂ ತೆಂಗು ಕೀಳುವ ಕೆಲಸ ನಿರ್ವಹಿಸುತ್ತಿರುವ ಇವರು ವಿವಾಹಿತನಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿ ಗಲಾಟೆ ಮಾಡುವ ಕಾರಣಕ್ಕೆ ಇವರ ಪತ್ನಿ ಸೌಮ್ಯಾ ಮನನೊಂದು ಕಳೆದು ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಶನಿವಾರ ಸಂಜೆ ಅಮಲು ಪದಾರ್ಥ ಸೇವಿಸಿ ಮನೆಯಲ್ಲಿ ತನ್ನಷ್ಟಕ್ಕೆ ಬೈದಾಡಿಕೊಂಡಿದ್ದು, ಬಳಿಕ ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದರು. ರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಸಹೋದರರು ಇವರನ್ನು ಹುಡುಕಾಡಿದಾಗ ಮನೆಯಿಂದ ಸುಮಾರು 20 ಅಡಿ ದೂರದ ಗುಡ್ಡದಲ್ಲಿ ಕಾಟು ಮರದ ಕೊಂಬೆಗೆ ಬೈರಾಸಿನಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ರಾತ್ರಿ ವೇಳೆ ಕಂಡು ಬಂದಿದೆ. ಈ ಬಗ್ಗೆ ಮೃತರ ಸಹೋದರ ಗಣೇಶ ಸಪಲ್ಯ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment