ಬೆಂಗಳೂರು, ಮಾರ್ಚ್ 18, 2025 (ಕರಾವಳಿ ಟೈಮ್ಸ್) : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಯುವ ಕಾಂಗ್ರೆಸ್ ನೂತನ ರಾಜ್ಯಾಧ್ಯಕ್ಷ ಮಂಜುನಾಥ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ “ಯುವ ಸಂಕಲ್ಪ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಭದ್ರ ರಾಷ್ಟ್ರ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷವು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ದೊಡ್ಡ ಬಲಿಷ್ಠ ಯುವ ಸಂಘಟನೆಯಾದ ಯುವ ಕಾಂಗ್ರೆಸ್ ಸಂಘಟನೆಯು ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಇತಿಹಾಸ ಹಾಗೂ ದೇಶದ ಐಕ್ಯತೆಗಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ವಿಚಾರ ಧಾರೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದ ಸಲೀಂ 18 ವರ್ಷ ವಯಸ್ಸಿನವರಿಗೆ ಮತದಾನದ ಹಕ್ಕು ನೀಡಿ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಮ್ಯೂನಿಕೇಷನ್ ನಲ್ಲಿ ಕ್ರಾಂತಿ ಮಾಡಿದ್ದ ರಾಜೀವ್ ಗಾಂಧಿ ಅವರು ಯುವ ಜನತೆಗೆ ಆದರ್ಶವಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇಂದು ಬಲಿಷ್ಠವಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಡಿ 2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಪ್ರಧಾನಿ ಮೋದಿ ಅವರು 11 ವರ್ಷ ಅಧಿಕಾರ ನಡೆಸಿದರೂ ವಿದೇಶದಿಂದ ಕಪ್ಪು ಹಣ ತರಲಿಲ್ಲ, ಎರಡು ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಸುಳ್ಳಿಗೆ ಏನಾದರೂ ಆಸ್ಕರ್ ಅವಾರ್ಡ್ ಇದ್ದರೆ ಅದು ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.
2014ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ಜನರಿಗೆ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿದ ಮೋದಿಯವರು ಕೊರೊನಾ ಸಂದರ್ಭದಲ್ಲಿ ಜನರಿಗೆ ನರಕ ತೋರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ಸಮಾಜದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ರಾಜ್ಯ ಹಾಗೂ ದೇಶಾದ್ಯಂತ ಯುವ ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡುತ್ತಿದೆ. ನೂರಾರು ನಾಯಕರನ್ನು ಬೆಳೆಸಿದ ಕೀರ್ತಿ ಯುವ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಸಲೀಂ ಅಹ್ಮದ್ ವಿವರಿಸಿದರು.
0 comments:
Post a Comment