ಬಂಟ್ವಾಳ ಮುಸ್ಲಿಂ ಸಮಾಜ ವತಿಯಿಂದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ
ಬಂಟ್ವಾಳ, ಎಪ್ರಿಲ್ 24, 2025 (ಕರಾವಳಿ ಟೈಮ್ಸ್) : ಇನ್ನೊಬ್ಬರನ್ನು ನೋಯಿಸಿ ನಾವು ಸಂತೋಷಪಡಬೇಕು ಎಂಬ ಸಿದ್ದಾಂತದಲ್ಲಿ ಕೇಂದ್ರ ಸರಕಾರ ಇಂದು ಕಾರ್ಯನಿರ್ವಹಿಸುತ್ತಿದೆ ಎಂದು ಕ್ರೈಸ್ತ ಮುಖಂಡ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಟೀಕಿಸಿದರು.
ಮುಸ್ಲಿಂ ಸಮಾಜ ಬಂಟ್ವಾಳ ಇದರ ವತಿಯಿಂದ ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿರುವ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಮಸೂದೆಯನ್ನು ತಕ್ಷಣ ವಾಪಾಸು ಪಡೆಯಲು ಆಗ್ರಹಿಸಿ ಬುಧವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಏಕದಿನ ಧರಣಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ದಮನಿಸುವ ಷಡ್ಯಂತ್ರ ಈ ಒಂದು ಮಸೂದೆ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಸರಕಾರದ ಈ ನಡೆ ಕೇವಲ ಮುಸ್ಲಿಮರಿಗೆ ಮಾತ್ರ ಮಾರಕವಾಗಿಲ್ಲ, ಮುಂದಿನ ದಿನಗಳಲ್ಲಿ ಸರಕಾರದ ಈ ವಕ್ರ ದೃಷ್ಟಿ ಕ್ರೈಸ್ತರ ವಿರುದ್ದ ಹಾಗೂ ದಲಿತರ ವಿರುದ್ದವೂ ಬೀರಲಿದೆ ಎಂದು ಎಚ್ಚರಿಸಿದರು. ಒಂದು ಸಮುದಾಯದ ಜನರಿಗೆ ಪೂರ್ಣವಾಗಿ ಒಪ್ಪಿಗೆ ಇಲ್ಲದ ಯಾವುದೇ ಮಸೂದೆ ಜಾರಿಗೆ ತಂದರೂ ಅದರಿಂದ ಯಾವ ಅರ್ಥ ಇದೆ ಎಂದವರು ಪ್ರಶ್ನಿಸಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ದೇಶದ ಸರ್ವ ಜನಾಂಗದ ಜನ ಒಟ್ಟಾಗಿ ಚಳುವಳಿ ರೂಪಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಬಳಿಕ ಸರ್ವ ಜನ ಒಂದಾಗಿ ಬಾಳುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೆಲವರು ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕೀಯ ಆರಂಭವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಹಿಂದಿನ ಸರಕಾರಗಳು ಜನರ ಒಳಿತಿಗಾಗಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದರೆ ಇಂದಿನ ಸರಕಾರ ಜನರನ್ನು ಪರಸ್ಪರ ಒಡೆಯುವ ದೃಷ್ಟಿಯಿಂದ ಕಾಯ್ದೆಗಳನ್ನು ರೂಪಿಸುತ್ತಿದೆ. ಇಂತಹ ಮನೋಭಾವಕ್ಕೆ ಕಡಿವಾಣ ಅಗತ್ಯ ಎಂದರು.
ಮುಸ್ಲಿಂ ಸಮಾಜದ ಅಧ್ಯಕ್ಷ ಕೆ ಎಚ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿ ಎ ಬಾವಾ, ಎಂ ಅಶ್ವನಿ ಕುಮಾರ್ ರೈ, ಹಾಜಿ ಬಿ ಎಚ್ ಖಾದರ್, ಬೇಬಿ ಕುಂದರ್, ಕೆ ಅಶ್ರಫ್, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಯಾಕೂಬ್ ಸಅದಿ, ಸಿನಾನ್ ಸಖಾಫಿ, ಉಸ್ಮಾನ್ ಹಾಜಿ ಕರೋಪಾಡಿ, ರಫೀವುದ್ದೀನ್ ಕುದ್ರೋಳಿ, ಶಾಹುಲ್ ಹಮೀದ್, ಯೂಸುಫ್ ಕರಂದಾಡಿ, ಮೂನಿಶ್ ಅಲಿ, ಪಿ ಎ ರಹೀಂ ಬಿ ಸಿ ರೋಡು, ಎಂ ಎಸ್ ಮುಹಮ್ಮದ್, ಜಾಫರ್ ಫೈಝಿ, ಚಂದ್ರಶೇಖರ ಭಂಡಾರಿ, ಅನ್ವರ್ ಸಾದತ್, ದಿನೇಶ್ ರೋಡ್ರಿಗಸ್, ಇಬ್ರಾಹಿಂ ನವಾಝ್, ಅಮಾನುಲ್ಲಾ ಮಾಸ್ಟರ್, ರಶೀದ್ ವಗ್ಗ, ಹನೀಫ್ ಖಾನ್, ಮುಹಮ್ಮದ್ ಬಡ್ಡೂರು, ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯನ್ನು ಖಂಡಿಸಿ ಅಲ್ಲಿ ಮಡಿದವರಿಗೆ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಸದ್ಗತಿ ಬಯಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮುಹಮ್ಮದ್ ಇಕ್ಬಾಲ್ ಐಎಂಆರ್ ಸ್ವಾಗತಿಸಿ, ಬಿ ಎಂ ಅಬ್ಬಾಸ್ ಅಲಿ ಪ್ರಸ್ತಾವನೆಗೈದರು. ಇಬ್ರಾಹಿಂ ಕೈಲಾರ್ ವಂದಿಸಿದರು.
0 comments:
Post a Comment