ಕಾರ್ಮಿಕರಿಗೆ ಗೌರವಯುತ ವೇತನದ ಜೊತೆಗೆ ರಕ್ಷಣೆಯ ಅಗತ್ಯತೆ ಹೆಚ್ಚಿದೆ - Karavali Times ಕಾರ್ಮಿಕರಿಗೆ ಗೌರವಯುತ ವೇತನದ ಜೊತೆಗೆ ರಕ್ಷಣೆಯ ಅಗತ್ಯತೆ ಹೆಚ್ಚಿದೆ - Karavali Times

728x90

30 April 2025

ಕಾರ್ಮಿಕರಿಗೆ ಗೌರವಯುತ ವೇತನದ ಜೊತೆಗೆ ರಕ್ಷಣೆಯ ಅಗತ್ಯತೆ ಹೆಚ್ಚಿದೆ

- ಡಿ.ಎಸ್.ಐ.ಬಿ ಪಾಣೆಮಂಗಳೂರು


ಹಗಲು ರಾತ್ರಿ ಎಂದು ನೋಡದೇ, ಬಿಸಿಲು ಮಳೆ ಗಾಳಿಗೂ ಜಗ್ಗದೇ, ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿ. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿಯಡಗಿದೆ. ಈ ಶ್ರಮಜೀವಿಗಳಿಲ್ಲದ ದೇಶವನ್ನು ಊಹಿಸಲು ಸಾಧ್ಯವಿದೆಯೇ? ಖಂಡಿತಾ ಇಲ್ಲ. ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ. ಇಂತಹ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ, ಇವರ ಶ್ರಮವನ್ನು ಗುರುತಿಸುವ, ಇವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಎಂದು ಆಚರಿಸಲಾಗುತ್ತದೆ.

ತನ್ನ ಹೆಂಡತಿ ಮಕ್ಕಳ ಹಸಿವು ನೀಗಿಸಲು ನಿಯ್ಯತ್ತಿನ ವ್ಯಕ್ತಿ ಹಗಲು ರಾತ್ರಿ ನೋಡದೆ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಚಿಲ್ಲರೆ ವೇತನವಾದರು ದಿನಪೂರ್ತಿ ದುಡಿದು ಬೆವರು ಸುರಿಸುತ್ತಾನೆ. ಇದನ್ನೆಲ್ಲ ಮಾಲಕನು ಅರ್ಥೈಸಬೇಕು. ಆತನ ಶ್ರಮಕ್ಕೆ ಗೌರವಿಸಬೇಕು. ಕೇವಲ ತಿಂಗಳಿಗೊಮ್ಮೆ ಸಂಬಳ ಕೊಡುವುದಕ್ಕೆ ಮಾತ್ರ ಮಾಲಕನಾದರೆ ಸಾಲದು. ಆತನ ಕಷ್ಟ-ನಷ್ಟಕ್ಕೂ ಭಾಗಿಯಾಗಬೇಕು. ವೇತನದ ಜೊತೆಗೆ ಸ್ವಲ್ಪವಾದರೂ ಬೋನಸ್ ಕೊಟ್ಟು ಖುಷಿಪಡಿಸಬೇಕು. ಎಲ್ಲಾ ವಿಷಯದಲ್ಲೂ ಆತನೊಂದಿಗೆ ಭಾಗಿಯಾಗಬೇಕು. ನಾನೊಬ್ಬ ಮಾಲಿಕನಾಗಲು, ತನ್ನನ್ನು ಜನರು ಧಣಿ, ಧಣಿ ಅಂತ ಕರೆಯಲು ತನ್ನೊಂದಿಗೆ ಇರುವ ಕಾರ್ಮಿಕ ಕಾರಣ ಎಂದು ಮರೆಯಲೇಬಾರದು. ಸರಿಯಾದ ವೇತನ ಕೊಟ್ಟು ಖುಷಿಪಡಿಸಬೇಕು. ವೇತನದಲ್ಲೂ ಬೇಧ ಭಾವ ಇರಕೂಡದು. ತುಂಬಾ ಕಡೆಗಳಲ್ಲಿ ಒಂದು ಗಂಡು-ಹೆಣ್ಣಿಗೂ ಒಂದೇ ರೀತಿಯ ಕೆಲಸವಾದರೆ ಅದರಲ್ಲಿ ಗಂಡಿಗೆ ಸ್ವಲ್ಪ ಹೆಚ್ಚು, ಹೆಣ್ಣಿಗೆ ಕಡಿಮೆ ವೇತನ ಕೊಡುವವರು ಸಾಕಷ್ಟು ಜನರಿದ್ದಾರೆ. ಅಂಗಡಿ, ಕಛೇರಿಗಳಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಕೊಡುವ ವೇತನ ಮಾತ್ರ ತೀರಾ ಕಡಿಮೆ. ಅವರಿಗೂ ಜೀವನದಲ್ಲಿ ಕಷ್ಟ ನಷ್ಟಗಳಿರುತ್ತದೆ. ಅವರಿಗೂ ಅವರ ಕೆಲಸಕ್ಕೆ ಬೆಲೆ ಕೊಟ್ಟು ಉತ್ತಮ ವೇತನ ನೀಡಬೇಕು. ಇನ್ನೂ ಸಮಯಕ್ಕಿಂತ ಸ್ವಲ್ಪ ಬೇಗ ಹೋದರೆ ಅದರಲ್ಲೂ ವೇತನ ಕಡಿತ. ಅಗತ್ಯಕ್ಕೆ ಒಂದೆರಡು ದಿನ ರಜೆ ಮಾಡಿದರೆ ಅದಕ್ಕೂ ಕಡಿತ ಇಂತಹ ವರ್ತನೆಗಳಿದ್ದರೆ ನಮ್ಮೊಂದಿಗೆ ಇರುವ ಕಾರ್ಮಿಕರಿಗೆ ಮಾಲಿಕನ ಮೇಲೆ ಕೆಟ್ಟದಾದ ನೋಟ ಇರುತ್ತವೆ. ಬೇಕು ಬೇಕಂತಲೇ ಮಾಲಿಕನನ್ನು ಸರ್ವ ನಾಶ ಮಾಡಲು ಕಾಯುತ್ತಿರುತ್ತಾರೆ. ಯಾವಾಗಲೂ ಮಾಲಕ ತನ್ನ ಉದ್ಯೋಗಿ ಜೊತೆ ಸ್ನೇಹಿತರಂತೆ ವರ್ತಿಸಬೇಕು. ಎಲ್ಲಾ ವಿಷಯದಲ್ಲೂ ಒಂದಾಗಿರಬೇಕು. ಇನ್ನು ಕಾರ್ಮಿಕನು ಅಷ್ಟೇ ನನ್ನನ್ನು ನಂಬಿರುವ ಮಾಲಿಕನಿಗೆ ಮೋಸ ಮಾಡಬಾರದು. ಯಾವಾಗಲೂ ಆತನಿಗೆ ಬೆನ್ನೆಲುಬಾಗಿರಬೇಕು. ಮಾಲಿಕನ ಬಿಸಿನೆಸ್‍ಗಳನ್ನು ಎತ್ತರಕ್ಕೆ ಬೆಳೆಸಲು ಸಹಕಾರಿಯಾಗಿರಬೇಕು. ಒಟ್ಟಾರೆ ಹೇಳುವುದಾದರೆ ಕಾರ್ಮಿಕ ಯಾವಾಗಲೂ ಕೆಲಸ ಮಾಡುವ ಕಡೆ ನಾನೂ ಕೂಡ ಒಬ್ಬ ಮಾಲಿಕನೆಂಬ ಖುಷಿ ಅವನಲ್ಲಿ ಯಾವಾಗಲೂ ಬರುತ್ತಿರಬೇಕು. ಕಠಿಣ ಪರಿಶ್ರಮ ನಿಮ್ಮನ್ನು ಎಂದೂ ಸೋಲುವುದಕ್ಕೆ ಬಿಡದು. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದು. ಇದು ಪ್ರತಿ ಕಾರ್ಮಿಕರೂ ಸಂಭ್ರಮಿಸುವ ಮತ್ತು ಪರಸ್ಪರ ಖುಷಿ ಹಂಚಿಕೊಳ್ಳುವ ಕ್ಷಣ.

ಒಬ್ಬ ಬಡ ವ್ಯಾಪಾರಿ ಇಂದು ಕೋಟ್ಯಾಧಿಪತಿಯಾಗಿದ್ದಾನೆ ಎಂದರೆ ಮೊದಲನೆಯದಾಗಿ ಅದು ಅವನ ಶ್ರಮ ಮತ್ತು ಛಲ. ಛಲದಿಂದಾಗಿ ತನ್ನ ಎಲ್ಲಾ ಕಷ್ಟ ನಷ್ಟಗಳನ್ನು ಎದುರಿಸಿ ಶ್ರಮಪಟ್ಟು ಇಂದು ಒಬ್ಬ ಮಾಲೀಕನಾಗಿ ನೂರಾರು ಜನರು ಆತನ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದರೆ ಅದು ನಿಜಕ್ಕೂ ಅವನ ಸಾಧನೆ. ಇಂದಿನ ಕಾಲದಲ್ಲಿ ಒಬ್ಬ ಮಾಲೀಕನಾಗಿರುವುದು ಅಷ್ಟು ಸುಲಭವಲ್ಲ. ಎಂತಹ ಸನ್ನಿವೇಶಗಳನ್ನು ಎದುರಿಸಿ ಕಷ್ಟ ನಷ್ಟಗಳಿಗೆ ತಲೆಬಾಗಬೇಕಾಗುತ್ತವೆ. ಇಲ್ಲವಾದಲ್ಲಿ ಸ್ವತಃ ಮಾಲಿಕನಾಗಲು ಅಸಾಧ್ಯ. ಒಬ್ಬ ಉದ್ಯೋಗಿ ಆತನ ಬಳಿ ಕೆಲಸ ಮಾಡುತ್ತಿದ್ದರೆ ಮಾತ್ರ ಆತ ಮಾಲೀಕನಾಗಲು ಸಾಧ್ಯ. ಎತ್ತರಕ್ಕೆ ಏರಿದ ನಂತರ ಹತ್ತಿಕೊಂಡು ಬಂದ ಮೆಟ್ಟಿಲುಗಳನ್ನು ಎಂದಿಗೂ ಮರೆಯಬಾರದು. ತನ್ನ ಕಛೇರಿಯಲ್ಲಿ ಅಥವಾ ರಸ್ತೆ ಬದಿಯಲ್ಲಿ, ಕಟ್ಟಡಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರನ್ನು ತನ್ನ ಮಾಲೀಕರು ಪ್ರೀತಿಯಿಂದ ಗೌರವಿಸಬೇಕು. ಅವರೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ನನ್ನೊಂದಿಗೆ ಕೆಲಸ ಮಾಡುವವರು, ನಾನು ಕೊಟ್ಟ ವೇತನದಿಂದ ಜೀವನ ಸಾಗಿಸುವವರೆಂಬ ದುರಹಂಕಾರ ಇರಬಾರದು. ಹೌದು ನೀನು ನೀಡುವ ವೇತನದಿಂದಲೇ ಅವನು ಜೀವನ ಸಾಗಿಸುತ್ತಿದ್ದಾನೆ. ಅವನು ಕಷ್ಟಪಟ್ಟು ದುಡಿಯುತ್ತಿರುವುದರಿಂದಲೇ ನೀನು ಕೂಡ ಮಾಲೀಕನಾಗಿ ಜೀವನ ಸಾಗಿಸುತ್ತಿರುವುದು ಎಂಬುದನ್ನು ಯಾವತ್ತಿಗೂ ಮರೆಯಬಾರದು. ಬೆಳಿಗ್ಗೆ ಕೆಲಸಕ್ಕೆ ಬಂದು ಸಾಯಂಕಾಲ ತನಕ ಬಿಡುವು ಇಲ್ಲದೆ ದುಡಿಯುವಾಗ ಅವರೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ಅವರ ಕಷ್ಟ ನಷ್ಟಕ್ಕೂ ಭಾಗಿಯಾಗಬೇಕು. ಸಮಯಕ್ಕಿಂತ ಹೆಚ್ಚಾಗಿ ದುಡಿಸಿ ಅರ್ಧಂಬರ್ಧ ವೇತನಕೊಟ್ಟು ಮೋಸ ಮಾಡುತ್ತ ಅವರ ಶಾಪ ಎಂದಿಗೂ ಸಿಗದೆ ಇರದು. ಸರಿಯಾಗಿ ಕೆಲಸ ಮಾಡಿಸಿದ ನಂತರ ಸರಿಯಾದ ವೇತನ ಅವನಿಗೆ ನೀಡಿ ಖುಷಿಪಡಿಸಬೇಕು. ವೇತನ ಸ್ವಲ್ಪ ಸ್ವಲ್ಪ ಕೊಟ್ಟು ನಾಳೆ ಬಾ, ನಾಳೆ ಕೊಡುವೆ ಎಂದು ಪ್ರತಿದಿನ ಆತನನ್ನು ಮಂಗ ಮಾಡುತ್ತಾ ಕೊನೆಗೂ ಕೊಡದೆ ಉಳಿಸಿಕೊಳ್ಳುವ ಮಾಲಿಕನು ಯಾವತ್ತಿಗೂ ಉದ್ದಾರ ಆಗಲ್ಲ. ಆತನಿಗೆ ಎಷ್ಟು ಕೆಲಸವಿದೆ ಅಷ್ಟೇ ಸೀಮಿತಗೊಳಿಸಬೇಕು. ಅದು ಬಿಟ್ಟು ಸ್ವಲ್ಪ ಆರಾಮವಾಗಿ ಇರುವಾಗ ಮನೆ ಕೆಲಸ ಮಾಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ವಾಹನ ತೊಳೆಸುವುದು ಇಂತಹ ಸನ್ನಿವೇಶಗಳು ಅದೆಷ್ಟೊ ಕಡೆಗಳಲ್ಲಿ ಕಾಣಬಹುದು. ಕಾರ್ಮಿಕ ತನ್ನ ಕೆಲಸ ಮುಗಿಸಿ ಹೊರಡುವಾಗ ಆತನೇ ವೇತನ ಕೇಳದೆ ಅದಕ್ಕೂ ಮುನ್ನ ಮಾಲೀಕನೆ ಕೊಟ್ಟು ಅವರನ್ನು ಖುಷಿಪಡಿಸಬೇಕು. ಕೆಲಸದವ ಅಂತ ಕೀಳಾಗಿ ಕಂಡು ಕಠಿಣವಾಗಿ ಕೆಲಸ ಮಾಡಿಸಬಾರದು.

ಇನ್ನು ಕೆಲಸದ ಜೊತೆ ಅವರಿಗೆ ರಕ್ಷಣೆ ಕೂಡ ನೀಡಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಥವಾ ಇನ್ನಿತರ ರಾಜ್ಯ, ದೇಶಕ್ಕೆ ಕೆಲಸಕ್ಕೆಂದು ಹೊರಟ ಕೆಲವೊಂದು ಕಾರ್ಮಿಕರು ಹಿಂದುರಿಗಿ ಬಂದಿದ್ದು ಅವರ ಮೃತ ದೇಹಗಳು. ಸಾವಿರ, ಲಕ್ಷಾಂತರ ವೇತನವಿದ್ದರು ನೆಮ್ಮದಿ ಇಲ್ಲವಾದಲ್ಲಿ ಆ ಕೆಲಸ ಇದ್ದರೆಷ್ಟು ಬಿಟ್ಟರೆಷ್ಟು ಎಂಬುದೇ ಪ್ರತಿಯೊಬ್ಬರ ಅಳಲು. ಹಲ್ಲೆ, ಕೊಲೆ, ದರೋಡೆಗಳಂತ ಕೃತ್ಯಗಳು ದಿನದಿಂದ ದಿನಕ್ಕೆ ಕಾಣುವಾಗ ನೆಮ್ಮದಿಯ ವಾತಾವರಣವನ್ನು ಕಳೆದುಕೊಂಡಿದ್ದೇವೆ. ಒಬ್ಬ ಕಾರ್ಮಿಕ ಕೆಲಸಕ್ಕೆ ಹೋಗಿ ನೆಮ್ಮದಿಯಿಂದ ಬರುತ್ತಾನೆ ಎಂಬ ನಂಬಿಕೆ ಇಲ್ಲವಾಗಿದೆ. ಅಲ್ಲಲ್ಲಿ ಕೊಲೆ, ದರೋಡೆಗಳು ಕಾಣುತ್ತಿದ್ದೇವೆ. ಹೆಣ್ಣು ಮಕ್ಕಳು ಮನೆಯ ಕಷ್ಟಗಳನ್ನು ಅರಿತು ದುಡಿಯಲು ಹೊರಬಂದರೆ ಕೆಲವೊಂದು ಕಾಮುಕರ ಕಾಟಕ್ಕೆ ಬೇಸತ್ತು ಅದೆಷ್ಟೋ ಜೀವಗಳು ನೇಣಿಗೆ ಶರಣಾಗಿದೆ. ಹೆಸರಿಗೆ ಹತ್ತಾರು ಸಿಸಿಟಿವಿಗಳಿದ್ದರೂ ಅನ್ಯಾಯವಾದಾಗ ಯಾವುದೂ ಕೂಡ ಕೆಲಸಕ್ಕೆ ಬರುವುದಿಲ್ಲ. ಸಿರಿವಂತನ ಆಸೆ ಪೂರೈಸಲು ಬಡಜೀವಿಗಳ ಮೇಲೆ ಅಕ್ರಮಿಸಿ ಇನ್ಯಾವುದೋ ಅಮಾಯಕರ ಮೇಲೆ ಆರೋಪಿಸಿ ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಕೆಲವೊಂದು ಮಾಲಿಕರು ಕೂಡ ತನ್ನ ಸಿಬ್ಬಂದಿಗಳನ್ನೆ ಮುಗಿಸಿ ಬಿಡುತ್ತಿದ್ದಾರೆ. ಅನ್ಯಾಯವಾದಾಗ ಚಿಲ್ಲರೆ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದಾರೆ. ಸರಕಾರಿ ಕೆಲಸವಾದರೂ ಖಾಸಗಿ ಕೆಲಸವಾದರೂ ಕಾರ್ಮಿಕರಿಗೆ ವಿಶೇಷ ರಕ್ಷಣೆ ನೀಡಲು ಸರ್ಕಾರ ಕಡ್ಡಾಯವಾಗಿ ಕಾನೂನು ರೂಪಿಸಬೇಕು. ಇಲ್ಲವಾದಲ್ಲಿ ಕಾರ್ಮಿಕರಿಗೆ ನೆಮ್ಮದಿಯಾಗಿ ಓಡಾಡಲು ಸಾಧ್ಯವಿಲ್ಲ. ಸರ್ವರಿಗೂ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.

  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕರಿಗೆ ಗೌರವಯುತ ವೇತನದ ಜೊತೆಗೆ ರಕ್ಷಣೆಯ ಅಗತ್ಯತೆ ಹೆಚ್ಚಿದೆ Rating: 5 Reviewed By: karavali Times
Scroll to Top